ಕನ್ನಡಪ್ರಭ ವಾರ್ತೆ ಚಿಂತಾಮಣಿ
ದೊಡ್ಡಗಂಜೂರು ಶಾಲೆಗೆ ವರ್ಗಾವಣೆಯಾದಾಗಿನಿಂದಲೂ ವಿದ್ಯಾರ್ಥಿನಿಯರ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ನ.೧೪ರಂದು ಶಾಲೆಯಲ್ಲಿ ಕರೆದಿದ್ದ ಪಾಲಕರ ಸಭೆಯಲ್ಲಿ ಮುಖ್ಯಶಿಕ್ಷಕರನ್ನು ಪಾಲಕರು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಶಿಕ್ಷಕ ಕ್ಷಮಾಪಣೆ ಕೇಳಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಇದರಿಂದ ಕುಪಿತಗೊಂಡ ಶಿಕ್ಷಕ ವಿದ್ಯಾರ್ಥಿನಿಯರ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತೆ ತನ್ನ ದರ್ಪ ತೋರಿದ್ದಾನೆನ್ನಲಾಗಿದೆ. ವಿದ್ಯಾರ್ಥಿನಿಯರು ಪಾಲಕರ ಗಮನಕ್ಕೆ ತಂದಿದ್ದು ಮಂಗಳವಾರ ಬೆಳಗ್ಗೆ ಶಾಲೆ ಬಳಿ ಧಾವಿಸಿದ ಪೋಷಕರ ಜತೆ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಶಾಲೆ ಮುಂಭಾಗದಲ್ಲಿ ಧರಣಿ ನಡೆಸಿದರು.
ಈ ಪ್ರೌಢಶಾಲೆಯ ವಸತಿ ನಿಲಯದಲ್ಲಿ ೧೦ನೇ ತರಗತಿಯ ೫೦ ವಿದ್ಯಾರ್ಥಿನಿಯರಿದ್ದಾರೆ. ಈ ಹಿಂದೆ ಚಿಂತಾಮಣಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲೂ ಆರೋಪಿ ಮುಖ್ಯಶಿಕ್ಷಕ ಇದೇ ರೀತಿ ಅಸಭ್ಯ ವರ್ತನೆ ತೋರಿದ್ದರು ಎನ್ನಲಾಗಿದೆ.ಮಾನಸಿಕ- ದೈಹಿಕ ಕಿರುಕುಳ ಆರೋಪ:
ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿದ್ದರು. ಮಕ್ಕಳ ಜತೆ ಪೋಷಕರು ಸಹ ಪ್ರತಿಭಟನೆಗೆ ಸಾಥ್ ನೀಡಿದರು. ಹಿರಿಯ ಅಧಿಕಾರಿಗಳೇ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದು ಚಿಂತಾಮಣಿ-ಶ್ರೀನಿವಾಸಪುರ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿದರು. ನಂತರ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ರಸ್ತೆ ತಡೆಗೆ ಅವಕಾಶ ಕಲ್ಪಿಸಲಿಲ್ಲ.