ಬೆಳೆ ವಿಮೆ ಹಣ ಬಿಡುಗಡೆ ಜಿಲ್ಲಾಧಿಕಾರಿಗೆ ರೈತಸಂಘ ಆಗ್ರಹ

KannadaprabhaNewsNetwork |  
Published : Feb 28, 2026, 02:15 AM IST
ಹಾವೇರಿ ಬೆಳೆವಿಮೆ ಹಣ ಪಾವತಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಸವಣೂರು ತಾಲೂಕು ಘಟಕದ ರೈತ ಮುಖಂಡರು ಡಿಸಿಯವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

2025-26ನೇ ಸಾಲಿನ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸವಣೂರು ತಾಲೂಕು ಘಟಕದ ಮುಖಂಡರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು.

ಹಾವೇರಿ: 2025-26ನೇ ಸಾಲಿನ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸವಣೂರು ತಾಲೂಕು ಘಟಕದ ಮುಖಂಡರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಚೆನ್ನಪ್ಪ ಮರಡೂರ ಮಾತನಾಡಿ, ಸವಣೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನೀರಾವರಿ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳ ಮೇಲೆ ವಿಮೆ ಕಂತು ಪಾವತಿಸಿದ ರೈತರಿಗೆ ವಿಮಾ ಪರಿಹಾರವನ್ನು ನೀಡಬೇಕು. ರೈತರು ಬಿತ್ತನೆ ಮಾಡಿದ ಕೆಲವು ದಿನಗಳ ಬಳಿಕ ಮಳೆರಾಯನ ಕಣ್ಣಾಮುಚ್ಚಾಲೆಯಿಂದ ಬೇಸತ್ತಿದ್ದ ರೈತರು ಬೆಳೆ ರಕ್ಷಣೆಗಾಗಿ ಹಳ್ಳದ ನೀರು, ಕಾಲುವೆ, ಅಕ್ಕಪಕ್ಕದ ಜಮೀನುಗಳಲ್ಲಿರುವ ನೀರಾವರಿ ಪಂಪ್‌ಸೆಟ್‌ಗಳಿಂದ ನೀರು ಹಾಯಿಸಿಕೊಂಡು ರೈತರು ಅಲ್ಪಸ್ವಲ್ಪ ಬೆಳೆ ರಕ್ಷಣೆ ಮಾಡಿಕೊಂಡಿದ್ದಾರೆ. ವಿಮೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಕೂಡ ಪರಿಹಾರ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದರು.ಮೆಕ್ಕೆಜೋಳಕ್ಕೆ ಯೋಗ್ಯ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಅಗ್ಗದ ರೇಟಿಗೆ ಮೆಕ್ಕೆಜೋಳ ಮಾರಾಟ ಮಾಡಿ ಹಾಕಿದ ಬಂಡವಾಳ ಬಾರದೆ ಕೈ ಸುಟ್ಟುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೆ 2026-27ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭಗೊಳ್ಳಲಿದ್ದು, ರೈತರು ತನ್ನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗಲಿದ್ದಾರೆ. ಜಮೀನು ಉಳುಮೆ ಮಾಡುವ ಯಂತ್ರೋಪಕರಣಗಳಿಗೆ ಬಾಡಿಗೆ, ಬಿತ್ತನೆ ಬೀಜ, ಗೊಬ್ಬರ ಖರೀದಿ ಮಾಡುವ ಹಂತದಲ್ಲಿದ್ದಾರೆ. ಫಸಲ್ ಭೀಮಾ ಯೋಜನೆಯಲ್ಲೂ ಬೆಳೆವಿಮೆ ತುಂಬಿದ್ದಾರೆ. ಆದ್ದರಿಂದ ವಿಮೆ ಪಾವತಿಸಿದ ಎಲ್ಲರಿಗೂ ಮಾರ್ಚ್ ತಿಂಗಳೊಳಗಾಗಿ ಕಳೆದ ಸಾಲಿನ ಇನ್ಸೂರೆನ್ಸ್ ಹಣವನ್ನು ರೈತರ ಖಾತೆಗೆ ಪಾವತಿಸಬೇಕು. ಇಲ್ಲದಿದ್ದರೆ ಉಗ್ರಹೋರಾಟ ಮಾಡಲಾಗುವುದೆಂದು ಎಚ್ಚರಿಸಿ ಮನವಿ ಸಲ್ಲಿಸಿದರು.ಈ ವೇಳೆ ಬಸನಗೌಡ ಅರಳಿಹಳ್ಳಿ, ನೂರಅಹ್ಮದ ಮುಲ್ಲಾ, ಅಬ್ದುಲ್ ಬುಡಂದಿ, ನಾಗಪ್ಪ ಹಡಪದ, ಮುತ್ತನಗೌಡ ಪಾಟೀಲ, ಸುರೇಶ ವಾಲ್ಮೀಕಿ, ಅಶೋಕ ಆಡೂರ, ಶಿವಣ್ಣ ಅಂಗಡಿ, ಸಿದ್ದಪ್ಪ ಕ್ಯಾಲಕೊಂಡ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಬೆಟಗೇರಿ ನಗರಸಭೆ ಅಧಿಕಾರಕ್ಕಾಗಿ ಸುಪ್ರೀಂ ಸಮರ!
ಇಂದಿನಿಂದ ಪಿಯುಸಿ ಪರೀಕ್ಷೆ, ಸಕಲ ಸಿದ್ಧತೆ