ರೈತರ ಸಾಲ ಸಂಪೂರ್ಣ ಮನ್ನಾಗೆ ರೈತಸಂಘ ಒತ್ತಾಯ

KannadaprabhaNewsNetwork | Published : Jul 22, 2024 1:20 AM

ಸಾರಾಂಶ

ಬದಲಿಗೆ ಸಮರ್ಪಕ ವಿದ್ಯುತ್ ಪೂರೈಸಿ ರೈತರ ಬದುಕು ಹಸನು ಮಾಡಿ. ರಾಜ್ಯದ 34 ಲಕ್ಷ ಹೈನುಗಾರಿಕೆ ರೈತರ ಹಾಲಿನ ಪ್ರೋತ್ಸಾದನ ಲೀಟರಿಗೆ ಐದು ರೂಪಾಯಿ ಹಣ ಸುಮಾರು 800 ಕೋಟಿರೂಗೂ ಅಧಿಕ ಬಾಕಿ ಉಳಿಸಿಕೊಂಡಿದೆ.ಈ ಕೂಡಲೇ ಸರ್ಕಾರ ಪ್ರೋತ್ಸಾಹ ಧನದ ಹಣ ಬಿಡುಗಡೆ ಮಾಡಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದ ವರ್ಷದ ಬರಗಾಲದಿಂದ ಚೇತರಿಸಿಕೊಳ್ಳಲಾಗದೆ ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ರಾಜ್ಯದಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಡಿದ ರೈತರಿಗೆ ಪರಿಹಾರ ನೀಡಲು ಕೂಡಲೇ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ನರಗುಂದ ಬಂಡಾಯ 44ನೇ ರೈತ ಹುತಾತ್ಮ ದಿನಾಚಚರಣೆಯಲ್ಲಿ ಮಾತನಾಡಿದರು.

ಬೆಳೆ ವಿಮೆ ನೀತಿ ಬದಲಾಗಬೇಕು

ಕೃಷಿ ಸಾಲ ನೀತಿ ಬದಲಾಗಬೇಕು, ಜಮೀನು ಮೌಲ್ಯದ ಶೇ 75 ರಷ್ಟು ಸಾಲ ನೀಡಬೇಕು. ಬೆಳೆ ವಿಮೆ ನೀತಿ ಬದಲಾಗಬೇಕು, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಜಾರಿ ಬರಬೇಕು ಎಂದರು.ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದಾಗಬೇಕು. ಕೃಷಿಕರ ಭೂಮಿ ಬಂಡವಾಳ ಶಾಹಿಗಳ ವಶವಾಗುವುದು ತಪ್ಪಬೇಕು ಎಂದು ಇತ್ತೀಚೆಗೆ ಚಾಮರಾಜನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾದ ರೈತಸಂಘದ ಮುಖಂಡರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡು ಪರಿಹರಿಸುವಂತೆ ನೀಡಿದ ಮನವಿ ಪತ್ರಗಳನ್ನು ತಮ್ಮ ಜತೆಗೆ ತೆಗೆದುಕೊಂಡು ಹೋಗುವ ಸೌಜನ್ಯ ತೋರದೆ ಕಸದ ಬುಟ್ಟಿಗೆ ಎಸೆದಿರುವುದು ಖಂಡನೀಯ. ಸಮಾಜವಾದಿ ಚಳವಳಿಯಿಂದ ಬಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಈ ನಡೆ ನಿರೀಕ್ಷೆ ಮಾಡಿರಲಿಲ್ಲ ಎಂದು ಕಿಡಿಕಾರಿದರು.ಪಂಪ್‌ಸೆಟ್‌ಗೆ ಆಧಾರ್‌ ಲಿಂಕ್‌ ಬೇಡ

ಕೃಷಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್ ಮಾಡುವುದು ಬೇಡ. ಬದಲಿಗೆ ಸಮರ್ಪಕ ವಿದ್ಯುತ್ ಪೂರೈಸಿ ರೈತರ ಬದುಕು ಹಸನು ಮಾಡಿ. ರಾಜ್ಯದ 34 ಲಕ್ಷ ಹೈನುಗಾರಿಕೆ ರೈತರ ಹಾಲಿನ ಪ್ರೋತ್ಸಾದನ ಲೀಟರಿಗೆ ಐದು ರೂಪಾಯಿ ಹಣ ಸುಮಾರು 800 ಕೋಟಿರೂಗೂ ಅಧಿಕ ಬಾಕಿ ಉಳಿಸಿಕೊಂಡಿದೆ.ಈ ಕೂಡಲೇ ಸರ್ಕಾರ ಪ್ರೋತ್ಸಾಹ ಧನದ ಹಣ ಬಿಡುಗಡೆ ಮಾಡಬೇಕು. ರಾಜ್ಯಾದ್ಯಂತ ಜಲಾಶಯಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿ ಅಂತರ್ಜಲ ಸಂಪತ್ತು ಕಡಿಮೆಯಾಗುತ್ತಿದೆ. ಜಲಾಶಯಗಳಲ್ಲಿ ತುಂಬಿರುವ ಹೂಳು ತೆಗೆಸಲು ಪೈಲಟ್ ಯೋಜನೆ ರೂಪಿಸಿ ಜಾರಿಗೊಳಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಗೋವಿಂದ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ರೈತರು ಬರಗಾಲದಿಂದ ಸಂಕಷ್ಟ ಪಡುತ್ತಿದ್ದಾರೆ.ರೇಷ್ಮೆ ,ಹಣ್ಣು ಹಂಪಲು ತರಕಾರಿ ಬೆಳೆದು ಜೀವನ ಮಾಡುತ್ತಿದ್ದಾರೆ. ಸರ್ಕಾರಗಳ ನಿರ್ಲಕ್ಷ್ಯ ನೀತಿ ರೈತರ ಸಮಸ್ಯೆ ಹೆಚ್ಚಲು ಕಾರಣವಾಗಿದೆ.ನಮ್ಮ ಹಕ್ಕುಗಳನ್ನು ನ್ಯಾಯಮಾರ್ಗದಲ್ಲಿ ಪಡೆಯಬೇಕಾದರೆ ಸಮರ್ಥ ನಾಯಕತ್ವದಡಿ ಸಂಘಟನೆ ಅವಶ್ಯಕತೆಯಿದೆ. ನಮ್ಮ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಹೋರಾಟ ಮುಂದುವರೆಸೋಣ ಎಂದರು.

ರೈತರಿಂದ ಮೆರವಣಿಗೆ:

44ನೇ ವರ್ಷದ ಹುತಾತ್ಮರ ದಿನಾಚರಣೆಯಲ್ಲಿ ಮೌನಾಚರಣೆಯೊಂದಿಗೆ ಮೊಂಬತ್ತಿ ಬೆಳಗುವ ಮೂಲಕ ಮಡಿದ ರೈತರ ಆತ್ಮಗಳಿಗೆ ಶಾಂತಿಯನ್ನು ಕೋರಲಾಯಿತು. ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಪ್ರಗತಿಪರ ರೈತರನ್ನ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಒಕ್ಕಲಿಗರ ಕಲ್ಯಾಣ ಮಂಟದಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆಯಲ್ಲಿ ಸಾಗಿಬರಲಾಯಿತು.

ಈ ವೇಳೆ ಹಸಿರು ಸೇನೆಯ ರಾಜ್ಯಾಧ್ಯಕ್ಷ ಶಿವಮೊಗ್ಗದ ಕರಿಬಸಪ್ಪಗೌಡ ,ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ವಿ.ಲೋಕೇಶ್ ಗೌಡ,ಗಡಿನಾಡು ರಾಜ್ಯ ರೈತಸಂಘದ ಯಣ್ಣೂರು ಬಸವರಾಜು,ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ತುಮಕೂರು ಜಿಲ್ಲೆ ಅಧ್ಯಕ್ಷ ಶಿವಕುಮಾರ್, ಮೈಸೂರು ಜಿಲ್ಲೆ ಅಧ್ಯಕ್ಷ ಹತ್ತಳ್ಳಿ ದೇವರಾಜ್,ಪದಾಧಿಕಾರಿಗಳಾದ ಶ್ರೀಕಾಂತ್ ರೆಡ್ಡಿ,ವೆಂಕಟಾಶಿವರೆಡ್ಡಿ ರಾಮಲಕ್ಷ್ಮಮ್ಮ ಕಾಂತಮ್ಮ ಇನ್ನು ಮುಂತಾದ 400 ಹೆಚ್ಚು ರೈತರು ಭಾಗವಹಿಸಿದ್ದರು.

Share this article