ಬಳ್ಳಾರಿ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಚುನಾವಣೆ ನಗರದ ಅಲ್ಲಂ ಸುಮಂಗಳಮ್ಮ ಮಹಿಳಾ ವಿದ್ಯಾಲಯದ (ಎಎಸ್‌ಎಂ) ಆವರಣದಲ್ಲಿ ಭಾನುವಾರ ಜರುಗಿತು.
ಜಿಲ್ಲೆಯ ಸಿರುಗುಪ್ಪ, ಕಂಪ್ಲಿ, ಕುರುಗೋಡು ಹಾಗೂ ಕಂಪ್ಲಿ ತಾಲೂಕಿನಲ್ಲಿ ಮತಕೇಂದ್ರಗಳನ್ನು ತೆರೆಯಲಾಗಿತ್ತು. ಆಯಾ ತಾಲೂಕು ವ್ಯಾಪ್ತಿಯ ಮತದಾರರು ಸ್ಥಳೀಯವಾಗಿ ಹಕ್ಕು ಚಲಾಯಿಸಿದರು.ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನಲ್ಲಿ 12 ಮತಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಬಳ್ಳಾರಿ ತಾಲೂಕು ಹಾಗೂ ನಗರದ ಮತದಾರರು ಎಎಸ್‌ಎಂ ಕಾಲೇಜಿನಲ್ಲಿಯೇ ಮತದಾನ ಮಾಡಿದರು.
ಸಿರುಗುಪ್ಪದಲ್ಲಿ ಮೂರು, ಕಂಪ್ಲಿ, ಕುರುಗೋಡು ಹಾಗೂ ಸಂಡೂರು ತಾಲೂಕಿನಲ್ಲಿ ಒಂದು ಮತಕೇಂದ್ರ ಸ್ಥಾಪಿಸಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ಮತದಾನದ ಅವಕಾಶವಿತ್ತು. ಸಂಜೆ 4 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಿತು.ನಗರದ ಎಎಸ್‌ಎಂ ಕಾಲೇಜು ಸೇರಿದಂತೆ ಜಿಲ್ಲೆಯ ವಿವಿಧ ಮತಕೇಂದ್ರಗಳಲ್ಲಿ ಚುರುಕಿನ ಮತದಾನವಾಗಿದೆ. ಹಕ್ಕು ಚಲಾಯಿಸಲು ಪುರುಷರು ಹಾಗೂ ಮಹಿಳೆಯರು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಮತದಾನ ಮಾಡಲು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ ಹಿನ್ನಲೆಯಲ್ಲಿ ಎಎಸ್‌ಎಂ ಕಾಲೇಜು ರಸ್ತೆಯಲ್ಲಿ ವಾಹನ ಓಡಾಟವನ್ನು ನಿರ್ಬಂಧಿಸಲಾಗಿತ್ತು. ಮತದಾರರಿಗೆ ಮಾತ್ರ ಪಾರ್ಕಿಂಗ್ ಗೆ ಅವಕಾಶವಿತ್ತು. ಹಕ್ಕು ಚಲಾಯಿಸಲು ಬರುವ ಮತದಾರರಿಗೆ ಕಾಲೇಜು ಗೇಟ್ ಬಳಿ ನಿಂತು ತಮಗೆ ಓಟು ನೀಡುವಂತೆ ಚುನಾವಣಾ ಸ್ಪರ್ಧಿಗಳು ಕೋರಿಕೊಳ್ಳುವ ದೃಶ್ಯಗಳು ಕಂಡು ಬಂದವು.
ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆಗೆ ಎರಡು ತಂಡಗಳು ಸ್ಪರ್ಧೆಯಲ್ಲಿವೆ. ಶ್ರೀಹಾನಗಲ್ಲು ಕುಮಾರೇಶ್ವರ ವಚನ ವೃಂದದಿಂದ ಅಧ್ಯಕ್ಷ ಸ್ಥಾನಕ್ಕೆ ಚಾನಾಳ್ ಶೇಖರ್ ಸ್ಪರ್ಧಿಸಿದ್ದು, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ತಂಡದಿಂದ ಎಸ್‌ಜಿ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಬಿಚ್ಚಗಲ್ಲು ಪಂಚಾಕ್ಷರಪ್ಪ ಸ್ಪರ್ಧಿಸಿದ್ದಾರೆ.ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ 30 ಜನ ಕಾರ್ಯಕಾರಿ ಸಮಿತಿಗೆ ಭಾನುವಾರ ಚುನಾವಣೆ ನಡೆದಿದೆ. ಸ್ಪರ್ಧೆಯಲ್ಲಿ ಎರಡು ತಂಡದಿಂದ ತಲಾ 10 ಜನ ಮಹಿಳೆಯರು ಸಹ ಸ್ಪರ್ಧಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 7791 ಮತದಾರರಿದ್ದಾರೆ. ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಮತ ಎಣಿಕೆ ಆರಂಭಗೊಂಡಿತು. ಭಾನುವಾರ ಮಧ್ಯರಾತ್ರಿ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.