ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಾಲ್ಮೀಕಿ ನಿಗಮದ ಹಗರಣ, ಮೈಸೂರು ಮುಡಾ ಹಗರಣದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಮುಂದಿನ ಆರು ತಿಂಗಳಲ್ಲಿ ಪತನವಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಭವಿಷ್ಯ ನುಡಿದರು.ಭಾನುವಾರ ನವನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜರುಗಿದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದಾದ ಮೇಲೆ ಒಂದರಂತೆ ರಾಜ್ಯ ಸರ್ಕಾರದ ಹಗರಣಗಳು ಬಯಲಾಗುತ್ತಿವೆ. ಮಾಧ್ಯಮಗಳು ಪ್ರತಿದಿನವೂ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುತ್ತಿವೆ. ವಾಲ್ಮೀಕಿ ಹಗರಣ, ಮೈಸೂರಿನ ಮೂಡಾ ಹಗರಣ ಸೇರಿದಂತೆ ಅನೇಕ ಹಗರಣಗಳ ದಾಖಲೆಗಳು ಸಿಕ್ಕರೂ ಸರಕಾರ ಮಾತ್ರ ಯಾವುದರ ಬಗ್ಗೆ ತಲೆಕೆಡೆಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಆಡಳಿತ ಯಂತ್ರದ ಮೇಲೆ ಹಿಡಿತ ತಪ್ಪಿದೆ. ಸಿದ್ದರಾಮಯ್ಯ ಹಿಂದಿನ ಬಾರಿ ಸಿಎಂ ಆಗಿದ್ದಾಗಿದನ ವ್ಯಕ್ತಿ ಆಗಿ ಉಳಿದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಶಾಸಕರುಗಳೇ ಮಾತನಾಡುತ್ತಿದ್ದಾರೆ. ಹಗರಣಗಳ ಹೊಣೆ ಹೊತ್ತು ಇಷ್ಟೊತ್ತಿಗೆ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದರು.ಮತ್ತೆ ಚುನಾವಣೆಯಾದರೆ ಬಿಜೆಪಿಗೆ 140 ಸೀಟ್:
ರಾಜ್ಯದಲ್ಲಿದ್ದ ಹಿಂದಿದ್ದ ಬಿಜೆಪಿ ಸರಕಾರ ಜಾರಿಗೆ ತಂದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಇಂದಿನ ಕಾಂಗ್ರೆಸ್ ಸರಕಾರ ಮತ್ತೊಮ್ಮೆ ಪೂಜೆ ಮಾಡಿ, ಅದೇ ಕೆಲಸಗಳನ್ನು ಪ್ರಾರಂಭಿಸುತ್ತಿದೆ. ಇಂತಹ ಸರಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದು, ಆದಷ್ಟು ಬೇಗ ಸರಕಾರ ಬಿದ್ದು, ಚುನಾವಣೆ ಬಂದರೇ ಬಿಜೆಪಿ 140ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದರು.ಪ್ರಧಾನಿ ಮೋದಿಯಿಂದ ದೇಶ ಅಭಿವೃದ್ಧಿ:
ದೇಶದಲ್ಲಿ ಮೋದಿ ಪ್ರಧಾನಿಯಾದ ನಂತರ ಅವರು ಕೈಗೊಂಡ ಅನೇಕ ಜನಪರ ಕೆಲಸಗಳು ಹಾಗೂ ದೃಢ ನಿರ್ಧಾರದಿಂದ ಭಾರತ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ತಲುಪಿದೆ. ಕೆಲವೇ ದಿನಗಳಲ್ಲಿ 3ನೇ ಸ್ಥಾನಕ್ಕೆ ತಲುಪಲಿದೆ ಎನ್ನುವುದು ನಾವು ಹೆಮ್ಮೆ ಪಡುವ ಸಂಗತಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 19 ಸ್ಥಾನ ಗೆಲ್ಲಲು ಕಾರ್ಯಕರ್ತರ ಶ್ರಮ ದೊಡ್ಡದಾಗಿದ್ದು, ಮುಂದಿನ ದಿನಗಳಲ್ಲಿ ಬರಲಿರುವ ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದರು.ಬಜೆಟ್‌ನಲ್ಲಿ ಮಹಿಳೆಯರಿಗೆ ಆದ್ಯತೆ:
ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಚುನಾವಣೆ ಎದುರಿಸಿ ಮೂರನೇ ಬಾರಿ ಪ್ರಧಾನಿಯಾಗುವುದು ಸುಲಭದ ಮಾತಲ್ಲ. ಪ್ರಧಾನಿ ಮೋದಿ ಅವರ ಕೆಲಸಗಳನ್ನು ನೋಡಿ ಜನರು ಅವರಿಗೆ ಮತ್ತೊಮ್ಮೆ ಅಧಿಕಾರ ನೀಡಿದ್ದಾರೆ. ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೋದಿ ಮಂಡಿಸುತ್ತಿರುವ ಬಜೆಟ್‌ನಲ್ಲಿ ಮಹಿಳೆಯರಿಗೆ, ಯುವಕರಿಗೆ ವಿಶೇಷ ಆದ್ಯತೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂದರು.ಈ ಸಂದರ್ಭದಲ್ಲಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿರುವ ನಾರಾಯಣಸಾ ಭಾಂಡಗೆ, ರಾಜ್ಯ ಪದಾಧಿಕಾರಿಗಳಾಗಿ ಆಯ್ಕೆಯಾದ ಡಾ. ವಿಜಯಲಕ್ಷ್ಮೀ ತುಂಗಳ, ಲಿಂಗನಗೌಡ ಗೌಡರ, ಶಶಿ ಗುತ್ತನ್ನವರ, ವಿಠ್ಠಲ ಯತ್ನಟ್ಟಿ, ನಾಗಪ್ಪ ಅಂಬಿ, ನಬಿ ನದಾಫ್ ಅವರನ್ನು ಸತ್ಕರಿಸಲಾಯಿತು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ವಿಪ ಸದಸ್ಯರಾದ ಪಿ.ಎಚ್.ಪೂಜಾರ ಹಾಗೂ ಹನುಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ಮಾತನಾಡಿದರು. ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಮುಖಂಡರಾದ ಬಸವರಾಜ ಯಂಕಂಚಿ, ರಾಜು ನಾಯ್ಕರ್, ಉಮೇಶ ಹಂಚಿನಾಳ, ಮುತ್ತು ಉಳ್ಳಾಗಡ್ಡಿ, ಗಿರೀಶ ಭಾಂಡಗೆ, ಬೇಲೂರಪ್ಪ ವಡ್ಡರ ಸೇರಿದಂತೆ ಅನೇಕರಿದ್ದರು.---
ಬಾಕ್ಸ್ಮೋದಿ ಕೈಯಲ್ಲಿ ದೇಶ ಸುಭದ್ರ
ಜಗತ್ತಿನ ಪ್ರತಿಯೊಂದು ದೇಶದಲ್ಲಿ ಒಂದೊಂದು ವ್ಯವಸ್ಥೆ ಇದೆ. ಇಡೀ ಜಗತ್ತಿನಲ್ಲಿ ದೊಡ್ಡ ಪ್ರಜಾಪ್ರಭುತ್ವವಾದ ದೇಶ ಭಾರತ. ಇಂತಹ ದೇಶದ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿ ಇಂದು ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ ಎನ್ನುವುದು ನಮಗೆ ಹೆಮ್ಮೆ. ಅವರು ಕೈಗೊಂಡ ಕೆಲಸ, ತೆಗೆದುಕೊಂಡ ನಿರ್ಧಾರಗಳಿಂದಲೇ ಅವರು ವಿಶ್ವ ನಾಯಕರ ಸ್ಥಾನ ಪಡೆದಿದ್ದಾರೆ. ಇಂತಹ ಅದ್ಭುತ್ ವ್ಯಕ್ತಿಯನ್ನು ಗೆಲ್ಲಿಸುವಲ್ಲಿ ಹೋರಾಟ ಮಾಡುವ ಮೂಲಕ ನಾವು ಮೋದಿ ಸೈನಿಕರಾಗುವುದೇ ನಮಗೆ ಹೆಮ್ಮೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.