ಬೆಂಗಳೂರಿನ ಕಸ ವಿಲೇವಾರಿಗೆ ರೈತಸಂಘದಿಂದ ವಿರೋಧ

KannadaprabhaNewsNetwork |  
Published : Aug 30, 2024, 01:04 AM IST
೨೯ಕೆಜಿಎಫ್೨ಕೆಜಿಎಫ್ ಸಮೀಪ ಬೆಂಗಳೂರಿನ ಕಸವನ್ನು ವಿಲೇವಾರಿ ಮಾಡುವುದನ್ನು ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಶಾಸಕಿ ರೂಪಕಲಾ ಶಶಿಧರ್‌ರಿಗೆ ಮನವಿ ಪತ್ರ ನೀಡಿದರು. | Kannada Prabha

ಸಾರಾಂಶ

ಜಿಲ್ಲೆಯ ಜನರು ಏನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಕುಡಿಯುವ ನೀರಿನ ಯೋಜನೆಗಳಲ್ಲಿ ಸಾವಿರಾರು ಕೋಟಿ ರು. ಹಗಲು ದರೋಡೆ ಮಾಡುತ್ತಿದ್ದರೆ, ಮತ್ತೊಂದು ಕಡೆ ಬೆಂಗಳೂರು ಬಿಬಿಎಂಪಿ ಆಯುಕ್ತರ ಜೊತೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಒಳ ಒಪ್ಪಂದ ಮಾಡಿಕೊಂಡು ಕಸ ವಿಲೇವಾರಿ ಮಾಡಲು ಮುಂದಾಗಿರುವುದು ಜಿಲ್ಲೆಯ ಜನರ ಹಕ್ಕನ್ನು ಕಸಿಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಬೆಂಗಳೂರಿನಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ೩.೫ ಟನ್ ಕಸವನ್ನು ಕೆಜಿಎಫ್ ಬಿಜಿಎಂಎಲ್ ವ್ಯಾಪ್ತಿಗೆ ಸೇರಿದ ೩೦೦ ಎಕರೆ ಜಮೀನಿನಲ್ಲಿ ವಿಲೇವಾರಿ ಮಾಡಲು ಮುಂದಾಗಿರುವುದಕ್ಕೆ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಶಾಸಕಿ ರೂಪಕಲಾ ಶಶಿಧರ್ ನಿವಾಸದೆದುರು ಪ್ರತಿಭಟನೆ ನಡೆಸಿದರು.

ನಗರದ ವಿವೇಕ ನಗರದ ಶಾಸಕಿ ಗೃಹ ಕಚೇರಿ ಎದುರು ಸಂಘಟನೆ ಕಾರ್ಯಕರ್ತರೊಂದಿಗೆ ಜಮಾಯಿಸಿ ಮಾತನಾಡಿ, ಈಗಾಗಲೇ ಪಾರಂಡಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಕೆಜಿಎಫ್ ಕಸವನ್ನೇ ಸಮರ್ಪಕವಾಗಿ ನಿರ್ವಹಣೆ ಮಾಡದ ಅಧಿಕಾರಿಗಳು, ಇನ್ನು ಬೆಂಗಳೂರು ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಾರೆಯೇ? ಇದು ಜಿಲ್ಲೆಯ ೨೫ ಲಕ್ಷ ಜನರ ಪ್ರಶ್ನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಜನರು ಏನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಕುಡಿಯುವ ನೀರಿನ ಯೋಜನೆಗಳಲ್ಲಿ ಸಾವಿರಾರು ಕೋಟಿ ರು. ಹಗಲು ದರೋಡೆ ಮಾಡುತ್ತಿದ್ದರೆ, ಮತ್ತೊಂದು ಕಡೆ ಬೆಂಗಳೂರು ಬಿಬಿಎಂಪಿ ಆಯುಕ್ತರ ಜೊತೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಒಳ ಒಪ್ಪಂದ ಮಾಡಿಕೊಂಡು ಕಸ ವಿಲೇವಾರಿ ಮಾಡಲು ಮುಂದಾಗಿರುವುದು ಜಿಲ್ಲೆಯ ಜನರ ಹಕ್ಕನ್ನು ಕಸಿಯುತ್ತಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಜಿಲ್ಲಾಡಳಿತ, ತಾಲೂಕು ಆಡಳಿತ ರೈತರ ಮಾರುಕಟ್ಟೆಗೆ ಅನುಕೂಲವಾಗಲು ೧೦೦ ಎಕರೆ, ಪೊಲೀಸ್ ಇಲಾಖೆಗೆ ೧೦೦ ಎಕರೆ ನೀಡಿರುವುದು ಸ್ವಾಗತಾರ್ಹ. ಅಭಿವೃದ್ಧಿಗೆ ಇನ್ನೂ ಬೇಕಾದರೆ ಸಾವಿರಾರು ಎಕರೆ ಜಮೀನು ನೀಡಲಿ. ಅದನ್ನು ಬಿಟ್ಟು ಬೆಂಗಳೂರಿನಲ್ಲಿಯೇ ಸಾವಿರಾರು ಎಕರೆ ಗೋಮಾಳ ಒತ್ತುವರಿ ಇರುವಾಗ ಅಲ್ಲಿನ ಅಧಿಕಾರಿಗಳು ಸರ್ಕಾರಿ ಜಮೀನನ್ನು ಗುರುತಿಸಿ ಕಸ ವಿಲೇವಾರಿ ಮಾಡಲು ಮುಂದಾಗಲಿ. ಕೆಜಿಎಫ್ ಸರ್ಕಾರಿ ಭೂಮಿ ಕಡೆ ತಲೆ ಹಾಕಿದರೆ ರೈತರ ಹಾಗೂ ಜನಸಾಮಾನ್ಯರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಮಸಾಗರ ವೇಣು, ಪಾರಂಡಹಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲಾಧಿಕಾರಿ ಈಗ ಗುರುತಿಸಿರುವ ಜಮೀನಿನ ಸುತ್ತ ಯಾವುದೇ ಹಳ್ಳಿಗಳಿಲ್ಲ. ಜೊತೆಗೆ ವೈಜ್ಞಾನಿಕವಾಗಿ ಘನ ತ್ಯಾಜ್ಯ ವಿಲೇವಾರಿ ಮಾಡುತ್ತೇವೆಂದು ಹೇಳುತ್ತಿರುವುದು ಹಾಸ್ಯಾಸ್ಪದ. ಕಸ ಸುರಿದರೆ ಸೊಳ್ಳೆ, ನೊಣಗಳು ಉತ್ಪತ್ತಿಯಾಗಿ ಜಿಲ್ಲಾದ್ಯಂತ ಆರೋಗ್ಯವಾಗಿರುವ ಜನರನ್ನು ಅನಾರೋಗ್ಯದವರನ್ನಾಗಿ ಮಾಡಿ ಮೆಡಿಕಲ್ ಮಾಫಿಯಾ ಹೆಚ್ಚಾಗಲು ಅನುವು ಮಾಡಿಕೊಡುವ ಆತಂಕ ಎದುರಾಗಿದೆ ಎಂದು ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕಿ ರೂಪಕಲಾ ಶಶಿಧರ್, ಜಿಲ್ಲೆಯ ಜನರು ನಮಗೆ ಅಧಿಕಾರ ನೀಡಿದ್ದಾರೆ. ಅವರ ಆರೋಗ್ಯಕ್ಕೆ ಹಾನಿಕರವಾಗುವ ಬೆಂಗಳೂರು ಕಸ ವಿಲೇವಾರಿ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಬಂಗವಾದಿ ನಾಗರಾಜ್ ಗೌಢ, ಕದರಿನತ್ತ ಅಪ್ಪೋಜಿ ಲಕ್ಷ್ಮಣ, ಸುರೇಶ್ ಬಾಬು, ಮಂಗಸಂದ್ರ ತಿಮ್ಮಣ್ಣ, ಶಿವಾರೆಡ್ಡಿ, ಸುಪ್ರೀಂ ಚಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!