ಕನ್ನಡಪ್ರಭ ವಾರ್ತೆ ಮದ್ದೂರುದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಂಧನ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ರಾಷ್ಟ್ರದ ರೈತರ ಕ್ಷಮೆ ಕೇಳಬೇಕು. ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಗ್ಗ ಜಗ್ಗಾಟದಿಂದ ರಾಜ್ಯದ ರೈತರು ಪರಿತಪಿಸುವಂತಾಗಿದೆ. ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ರೈತರು ಮಾಡಿರುವ ಎಲ್ಲ ಕೃಷಿ ಸಾಲ, ಬ್ಯಾಂಕ್, ಸಹಕಾರ ಸಂಘ ಸಾಲಗಳನ್ನು ಮನ್ನಾ ಮಾಡಬೇಕು. ಬರಗಾಲದಿಂದ ಉಂಟಾಗಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ರೈತರಿಗೆ ನರೇಗಾ ಅಡಿಯಲ್ಲಿ ವಿವಿಧ ಕೆಲಸಗಳನ್ನು ನೀಡುವ ಮೂಲಕ ಆರ್ಥಿಕ ಹೊರೆಯನ್ನು ತಗ್ಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ್ ಕೆ.ಎಸ್. ಸೋಮಶೇಖರ್ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿ, ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ತಮ್ಮ ಪ್ರತಿಭಟನೆ ಹಿಂಪಡೆದರು.ರೈತ ಸಂಘದ ಮುಖಂಡರಾದ ಸೊ.ಸಿ.ಪ್ರಕಾಶ, ಪಣ್ಣೆದೊಡ್ಡಿ ವೆಂಕಟೇಶ, ರಮೇಶ, ಕೆ.ಎಸ್.ಪುಟ್ಟಸ್ವಾಮಿ, ಬಿ.ಎಂ. ದೇವರಾಜು, ಕೆ.ಬಿ.ರಾಜು, ಉಮೇಶ, ಚನ್ನಪ್ಪ, ಕೃಷ್ಣ, ಹನುಮಂತಯ್ಯ, ಲಿಂಗರಾಜು, ಎಂ.ಸಿ. ರಾಜೇಶ, ಲಿಂಗೇಗೌಡ, ಕೆ.ಎಸ್. ರಾಮಲಿಂಗೇಗೌಡ, ಕೆ.ಟಿ. ಚಂದ್ರಶೇಖರ್, ಮಹದೇವಸ್ವಾಮಿ ಸೇರಿದಂತೆ ಇತರರಿದ್ದರು.