ಕನಕಪುರ: ಜಿಲ್ಲಾದ್ಯಂತ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ 59 ಕೋಟಿ ಬಾಕಿ ಉಳಿಸಿಕೊಂಡಿರುವ ಸರ್ಕಾರ ಕೂಡಲೇ ಸಂದಾಯ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಒತ್ತಾಯಿಸಿದರು. ನಗರದ ರೈತ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾದ್ಯಂತ ಸುಮಾರು 6466 ರೈತರಿಗೆ 73 ಕೋಟಿ ಹಣ ಸಂದಾಯವಾಗಿದೆ. ಇನ್ನೂ 5227 ಫಲಾನುಭವಿ ರೈತರಿಗೆ 59 ಕೋಟಿ ರು. ಬಾಕಿ ಹಣವನ್ನು ಕೂಡಲೇ ಸಂದಾಯ ಮಾಡಬೇಕೆಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿವೆ. ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಸರ್ಕಾರ ದಿವಾಳಿಯಾಗಿದೆ. ಜಾನುವಾರುಗಳು ನೀರಿಲ್ಲದೆ ಸಾವನ್ನಪ್ಪುತ್ತಿದ್ದು ಕೂಡಲೇ ಗೋಶಾಲೆ ಗಳನ್ನು ತೆರೆಯಬೇಕೆಂದು ಒತ್ತಾಯಿಸಿದರು.
ಕೆಲವು ರಿಯಲ್ ಎಸ್ಟೇಟ್ ಮಾಫಿಯಾದ ಒಂದಷ್ಟು ವ್ಯಕ್ತಿಗಳು ನಕಲಿ ರೈತರು ಹೋರಾಟ ಮಾಡುತಿದ್ದಾರೆಂದು ಅಪಪ್ರಚಾರ ಮಾಡುತ್ತಿರುವ ವಿರುದ್ಧ ಬಿಡದಿ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಿಡದಿ ಭಾಗದ ರೈತರ ಹೋರಾಟಕ್ಕೆ ಎಲ್ಲಾ ಕನ್ನಡಪರ, ರೈತ, ಪ್ರಗತಿಪರ ಸಂಘಟನೆಗಳು ಬೆಂಬಲಿಸಬೇಕೆಂದು ವಿನಂತಿಸಿದರು. ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟಕ್ಕೆ ಸಜ್ಜಾಗಬೇಕೆಂದು ರೈತರಿಗೆ ಕರೆಕೊಟ್ಟರು.ಹಾರೋಬೆಲೆ ಜಲಾಶಯದ ಒಂದಷ್ಟು ರೈತರ ಭೂಮಿಗೆ ನೀರನ್ನು ಹರಿಸದೆ ಚುಂಚಿ ಜಲವಿದ್ಯುತ್ ಕಾರ್ಖಾನೆಗೆ ನೀರು ಹರಿಸುತ್ತಿರುವ ಇಂಜಿನಿಯರ್ ಮತ್ತು ಚೀಫ್ ಇಂಜಿನಿಯರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲು ಒತ್ತಾಯಿಸಿದರು.
ಕೆ ಕೆ ಪಿ ಸುದ್ದಿ03: