ನರಗುಂದ: ತಾಲೂಕಿನಲ್ಲಿ ಮುಂಗಾರು ಮಳೆಯಾಗದೆ ರೈತ ಸಮುದಾಯ ತೀವ್ರ ತೊಂದರೆಯಲ್ಲಿದೆ. ಆದರೂ ಜಿಲ್ಲೆಯಲ್ಲಿ ನರಗುಂದ ಹೊರತಪಡಿಸಿ ಉಳಿದ ತಾಲೂಕನ್ನು ಬರಗಾಲವೆಂದು ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಿದ್ದು ಖಂಡನೀಯ. ಕೂಡಲೇ ಬರಪೀಡಿತ ಪಟ್ಟಿಗೆ ನರಗುಂದ ತಾಲೂಕನ್ನು ಸೇರ್ಪಡೆ ಮಾಡಬೇಕೆಂದು ಜಿಲ್ಲಾ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಆಗ್ರಹಿಸಿದರು.
ಆದರೆ ಸಕಾಲಕ್ಕೆ ಮಳೆಯಾಗದೆ ಸದ್ಯ ಎಲ್ಲ ಬೆಳೆಗಳು ಜಮೀನಿನಲ್ಲಿ ತೇವಾಂಶ ಕೊರತೆಯಿಂದ ಒಣಗುತ್ತಿವೆ. ಇಂಥ ಸಂದರ್ಭದಲ್ಲಿ ಜಿಲ್ಲಾಡಳಿತ ಜಿಲ್ಲೆಯ 7 ತಾಲೂಕಿನಲ್ಲಿ ನರಗುಂದ ಹೊರತುಪಡಿಸಿ ಉಳಿದ 6 ತಾಲೂಕನ್ನು ಬರಗಾಲ ಹೆಚ್ಚು ಆವರಿಸಿದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿರುವುದು ಸರಿಯಲ್ಲ ಎಂದರು.
ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಮಾತನಾಡಿ, ತಾಲೂಕಿನಲ್ಲಿ ಆಗಿರುವ ಮಳೆಯನ್ನು ಸರಿಯಾಗಿ ಮಾಪನ ಮಾಡಿ ತಾಲೂಕಿನಲ್ಲಿ ಬರಗಾಲವಿದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ಅಧಿಕಾರಿಗಳು ಬರಪೀಡಿತ ತಾಲೂಕು ಎಂದು ಮಾಹಿತಿಯನ್ನು ಸರ್ಕಾರಕ್ಕೆ ನೀಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಮಳೆ ಕೊರತೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ಆದ್ದರಿಂದ ಅಧಿಕಾರಿಗಳು ಬೇಗ ಬೆಳೆಹಾನಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಮಾಹಿತಿ ರವಾನಿಸಿ ಬೆಳೆಹಾನಿ ಮಾಡಿಕೊಂಡ ರೈತರಿಗೆ ಪ್ರತಿ 1 ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಜಾನುವಾರುಗಳಿಗಾಗಿ ಗೋಶಾಲೆ ಪ್ರಾರಂಭಿಸಬೇಕು. 2025- 26ನೇ ಸಾಲಿನ ಮುಂಗಾರು ಹಂಗಾಮಿನ ಗೋವಿನಜೋಳ ಬೆಳೆಹಾನಿ ಮಾಡಿಕೊಂಡ ರೈತರಿಗೆ ಬೆಳೆವಿಮೆ ಪರಿಹಾರವನ್ನು ತಕ್ಷಣವೇ ಸರ್ಕಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.