ಶಿಗ್ಗಾಂವಿ: ತಾಲೂಕಿನ ಬಂಕಾಪುರ ಟೋಲ್ ಪ್ಲಾಜಾದಲ್ಲಿ ಆ.೧೫ರಂದು ಸ್ವಾತಂತ್ರ್ಯ ದಿನಾಚರಣೆಯಂದು ಸಂವಿಧಾನ ಶಿಲ್ಫಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸದಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯ ಬಸವರಾಜ ಕಟ್ಟಿಮನಿ ನೇತೃತ್ವದಲ್ಲಿ ಟೋಲ್ ಪ್ಲಾಜಾಗೆ ಮುತ್ತಿಗೆ ಹಾಕಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಟೋಲ್ ಮ್ಯಾನೇಜರ್ ಸಂತೋಷ ಮಠಮ್ ಮಾತನಾಡಿ, ನಮ್ಮ ಟೋಲ್ ನಾಕಾದಲ್ಲಿ ಪ್ರತಿಯೊಂದು ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡುವುದರ ಜೊತೆಗೆ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಸಂವಿಧಾನ ದಿನಾಚರಣೆ, ಅಂಬೇಡ್ಕರ್ ಜಯಂತಿಯಂದು ವಿಶೇಷವಾಗಿ ಡಾ.ಬಿ.ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಗುತ್ತಿದೆ. ಅದರೊಟ್ಟಿಗೆ ಮಹಾತ್ಮ ಗಾಂಧಿ ಜಯಂತಿಯನ್ನೂ ಕೂಡಾ ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಕಚೇರಿಯಲ್ಲಿ ಎಲ್ಲ ರಾಷ್ಟ್ರೀಯ ನಾಯಕರ, ಮಹಾಪುರುಷರ ಭಾವಚಿತ್ರಗಳಿವೆ. ಆದರೆ ಸ್ವಾತಂತ್ರ್ಯ ದಿನಾಚರಣೆಯಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನಿಯರ ಭಾವಚಿತ್ರವನ್ನು ಇಟ್ಟು ಪೂಜಿಸಲಾಗಿದೆ. ಆದರೆ ನಮ್ಮ ಗಮನಕ್ಕೆ ಬಾರದೇ ಅಂಬೇಡ್ಕರ್ ಭಾವಚಿತ್ರವನ್ನು ಪೂಜಿಸದೇ ಇರುವುದಕ್ಕೆ ಕ್ಷಮೆ ಯಾಚಿಸುತ್ತೇನೆ. ದಯವಿಟ್ಟು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು. ನಂತರ ಎಲ್ಲರೂ ಸೇರಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ವಿಶೇಷಪೂಜೆ ಸಲ್ಲಿಸಿ, ಜೈಕಾರ ಹಾಕುವಮೂಲಕ ನಮನ ಸಲ್ಲಿಸಿದರು.
ದಿಢೀರ್ ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡೆ ತಡೆ ಉಂಟಾಯಿತು. ದಲಿತ ಸಂಘರ್ಷ ಸಮಿತಿಯ ಸುರೇಶ ಹರಿಜನ, ಮನೋಜ್ ಹರಿಜನ, ಗಂಗಾಧರ ಕಟ್ಟಿಮನಿ, ಫಕ್ಕೀರೇಶ ಕಟ್ಟಿಮನಿ, ಮನೋಜ್ ಮಾದರ, ಮಾರ್ತಂಡಪ್ಪ ಮಾದರ ಸೇರಿದಂತೆ ಇತರರು ಇದ್ದರು.