ಹಗರಿಬೊಮ್ಮನಹಳ್ಳಿ: ವಿದ್ಯುತ್ ವಿತರಣೆಗೆ ಅನುಮತಿ ಕೋರಿ ಟಾಟಾ ಪವರ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗ ಪರಿಗಣಿಸಿದರೆ ರೈತರ ಸರ್ವನಾಶ ಖಚಿತ. ರೈತರು ಕೃಷಿಯಿಂದ ವಿಮುಖರಾಗಿ, ಇಡೀ ದೇಶದ ಆಹಾರ ಭದ್ರತೆ ಅತಂತ್ರಗೊಳ್ಳುವ ಅಪಾಯವಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ್ ಎಚ್ಚರಿಸಿದರು.ರಾಜ್ಯದ ೧೯ ಜಿಲ್ಲೆಗಳ ವಿದ್ಯುತ್ ವಿತರಣಾ ಲೈಸೆನ್ಸ್ ಕೋರಿ ಟಾಟಾ ಪವರ್ ಕಂಪನಿಯು ಕೆಆರ್‌ಇಸಿಗೆ ಸಲ್ಲಿಸಿರುವ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗ ಪರಿಗಣಿಸಬಾರದು ಎಂದು ಆಗ್ರಹಿಸಿ ಪಟ್ಟಣದ ಗೆಸ್ಕಾಂ ಕಚೇರಿಯ ಬಳಿ ಬುಧವಾರ ಸಿಐಟಿಯು ಸಂಘಟನೆ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ರೈತ ಸಂಘದ ಸಂಚಾಲಕ ಎಸ್.ಜಗನ್ನಾಥ್ ಮಾತನಾಡಿ, ಸಾರ್ವಜನಿಕರ ತೆರಿಗೆ ಹಣದಲ್ಲಿ ಸ್ಥಾಪಿಸಲ್ಪಟ್ಟಿರುವ ಲಕ್ಷಾಂತರ ಮೌಲ್ಯದ ವಿದ್ಯುತ್ ಇಲಾಖೆಯನ್ನು ಖಾಸಗಿಯವರಿಗೆ ಒಪ್ಪಿಸಿದರೆ ಇಲಾಖೆಯ ಲಕ್ಷಾಂತರ ನೌಕರರ ಬದುಕು ಕೂಡ ಮೂರಾಬಟ್ಟೆಯಾಗುತ್ತದೆ. ಇಲಾಖೆಯ ನೌಕರರ ಸಂಬಳ ಸಹಿತ ಅನೇಕ ಸೌಲಭ್ಯಗಳೂ ಇಲ್ಲದಂತಾಗಿ ವಿದ್ಯುತ್ ವಲಯದ ಉದ್ಯೋಗಿಗಳ ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ಗೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರ ಮೂಲಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.ಗೆಸ್ಕಾಂ ಎಇಇ ನಾಗರಾಜ್ ಕುರೇಕೊಪ್ಪ, ವಿಭಾಗೀಯ ಕಚೇರಿಯ ಎಇ ರಾಘವೇಂದ್ರ, ಸಿಬ್ಬಂದಿ ನಾರಪ್ಪ, ಚಂದ್ರಮ್ಮ, ರಾಮು, ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ರಾಘವೇಂದ್ರ, ಪದಾಧಿಕಾರಿಗಳಾದ ತಿಮ್ಮಣ್ಣ, ರಾಮು, ವಿಶ್ವನಾಥ್, ಕೊಟ್ರೇಶ್ ಮತ್ತಿತರರು ಪಾಲ್ಗೊಂಡು ಪ್ರತಿಭಟನೆಯನ್ನು ಬೆಂಬಲಿಸಿದರು.