ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

KannadaprabhaNewsNetwork |  
Published : Nov 08, 2025, 03:00 AM IST
 ಅಥಣಿ | Kannada Prabha

ಸಾರಾಂಶ

ಕಳೆದ ಮೂರ್ನಾಲ್ಕು ದಿನಗಳಿಂದ ಕಬ್ಬಿನ ಬೆಲೆಗೆ ಸಂಬಂಧಿಸಿದಂತೆ ರೈತರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ರಾಜ್ಯ ಸರ್ಕಾರ ಗೇಟ್ ಗೇನ್ ವಿಧಾನವನ್ನು ಜಾರಿಗೆ ತಂದರೆ ರೈತರಿಗೆ ಲಾಭ ದೊರಕಲಿದೆ. ಈ ಬಗ್ಗೆ ಸಿಎಂ ಮತ್ತು ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕಳೆದ ಮೂರ್ನಾಲ್ಕು ದಿನಗಳಿಂದ ಕಬ್ಬಿನ ಬೆಲೆಗೆ ಸಂಬಂಧಿಸಿದಂತೆ ರೈತರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ರಾಜ್ಯ ಸರ್ಕಾರ ಗೇಟ್ ಗೇನ್ ವಿಧಾನವನ್ನು ಜಾರಿಗೆ ತಂದರೆ ರೈತರಿಗೆ ಲಾಭ ದೊರಕಲಿದೆ. ಈ ಬಗ್ಗೆ ಸಿಎಂ ಮತ್ತು ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ಹಾಗೂ ಕಾರ್ಖಾನೆಯ ಚುನಾಯಿತ ನಿರ್ದೇಶಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಬ್ಬಿಗೆ ಹೆಚ್ಚಿನ ದರ ನೀಡಬೇಕಾದರೆ ಸಕ್ಕರೆ ಮಾರಾಟದ ಟೆಂಡರ್ ಪ್ರಕ್ರಿಯೆ ದರ ಕೂಡ ಪರಿಷ್ಕರಣಿ ಆಗಬೇಕು. ಸಕ್ಕರೆ ದರ ಹೆಚ್ಚಾದರೆ ಕಾರ್ಖಾನೆಗೆ ಹೆಚ್ಚಿನ ಲಾಭ ಬರುತ್ತದೆ. ಇದರಿಂದ ರೈತರಿಗೆ ಉತ್ತಮವಾದ ಬೆಲೆ ನೀಡಲು ಸಾಧ್ಯವಾಗುತ್ತದೆ ಎಂದರು. ರೈತರು ತಮ್ಮ ಬೇಡಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಕಬ್ಬಿನ ದರ ನಿಗದಿಯಾಗುವ ಸಾಧ್ಯತೆ ಇದೆ. ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರ ಕಾರ್ಖಾನೆಯಾಗಿದ್ದು, ಪ್ರಸಕ್ತ ವರ್ಷದಲ್ಲಿ 8 ಲಕ್ಷ ಟನ್ ಕಬ್ಬುನುರಿಸುವ ಗುರಿ ಹೊಂದಲಾಗಿದೆ. ಈ ಗುರಿ ತಲುಪಬೇಕಾದರೇ ಇತ್ತೀಚಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಚುನಾಯಿತರಾದ ನಿರ್ದೇಶಕರು ತಮ್ಮ ವಲಯದಲ್ಲಿನ ಹೆಚ್ಚಿನ ಪ್ರಮಾಣದ ಕಬ್ಬನ್ನು ಕಾರ್ಖಾನೆಗೆ ಕಳುಹಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಬ್ಬು ಕಳುಹಿಸಿದ ರೈತರಿಗೆ ಒಂದೇ ತಿಂಗಳಲ್ಲಿ ಬಿಲ್‌ನ್ನು ಪಾವತಿಸುವ ಮೂಲಕ ರೈತರ ವಿಶ್ವಾಸವನ್ನು ಗೆಲ್ಲಬೇಕು ಎಂದು ಸಲಹೆ ನೀಡಿದರು.ತಾಲೂಕಿನಲ್ಲಿ ಈಗ 76 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತಿದೆ. ಅಮಾಜೇಶ್ವರಿ ಏತ ನೀರಾವರಿ ಯೋಜನೆ ಪೂರ್ಣಗೊಂಡ ನಂತರ ಮುಂಬರುವ 3 ವರ್ಷಗಳಲ್ಲಿ 2 ಕೋಟಿ ಟನ್ ನಷ್ಟು ಕೊಬ್ಬು ಬೆಳೆಯುವ ನಿರೀಕ್ಷೆ ಇದೆ ಎಂದರು.ಕೊಕಟನೂರದ ಶಾಮ ಪೂಜಾರಿ, ಶೈಗುಣಿಸಿಯ ಸಂಜಯಗೌಡ ಪಾಟೀಲ, ದರೂರ ಗ್ರಾಮದ ಸತ್ಯಪ್ಪ ಭಾಗೆಣ್ಣವರ ಮಾತನಾಡಿ, ಕೇಂದ್ರ ಸರ್ಕಾರ ಘೋಷಿಸಿದ ಎಫ್‌ಆರ್‌ಪಿ ದರದಂತೆ ನೀಡಬೇಕೆಂದು ಎಲ್ಲ ಕಬ್ಬು ಬೆಳೆಗಾರರು ಹಾಗೂ ರೈತ ಪರ ಸಂಘಟನೆಗಳು ಹೋರಾಟವನ್ನು ನಡೆಸುತ್ತಿದ್ದಾರೆ. ರೈತರ ಹೋರಾಟ ನ್ಯಾಯಯುತವಾಗಿದೆ. ಆದರೆ, ಕೇಂದ್ರ ಸರ್ಕಾರ ಕಾರ್ಖಾನೆಗಳು ಉತ್ಪಾದಿಸಿದ ಸಕ್ಕರೆ ದರವನ್ನು ಹೆಚ್ಚಿಸದೇ ಇರುವುದರಿಂದ ಕಾರ್ಖಾನೆಗಳು ನಷ್ಟದಲ್ಲಿ ಇದ್ದು, ಸಕ್ಕರೆ ದರ ಪರಿಷ್ಕರಣಿ ಆದಾಗ ಮಾತ್ರ ಕಾರ್ಖಾನೆಗಳು ರೈತರಿಗೆ ಹೆಚ್ಚಿನ ಬಿಲ್‌ ಕೊಡಲು ಸಾಧ್ಯವಿದೆ. ಕಾರ್ಖಾನೆಗೆ ಆಯ್ಕೆಯಾಗಿರುವ ನೂತನ ನಿರ್ದೇಶಕರು ಕಾರ್ಖಾನೆಯ ಪ್ರಗತಿಗೆ ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ತಮ್ಮ ಭಾಗದಲ್ಲಿರುವ ಅತ್ಯಧಿಕ ಕಬ್ಬನ್ನ ಕಾರ್ಖಾನೆಗೆ ಕಳುಹಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು. ನಿಕಟ ಪೂರ್ವ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ಕೃಷ್ಣ ಸಹಕರಿ ಸಕ್ಕರೆ ಕಾರ್ಖಾನೆಯು ರೈತರು ಕಟ್ಟಿ ಬೆಳೆಸಿದ ಕಾರ್ಖಾನೆಯಾಗಿದೆ. ಇತ್ತೀಚಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ವಿರೋಧಿಗಳು ಏನೇ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೂ ನಮ್ಮ ರೈತ ಸಹಕಾರಿ ಪೆನಲ್ ಅಭ್ಯರ್ಥಿಗಳಿಗೆ ರೈತರು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಮತ್ತೆ ಆಯ್ಕೆ ಮಾಡಿದ ತಮ್ಮೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.ಈಗ ಎಲ್ಲ ರೈತರು ಮತ್ತು ರೈತ ಸಂಘಟನೆ ಅವರು ಕಾರ್ಖಾನೆಯಿಂದ ಹೆಚ್ಚಿನ ದರ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಉಳಿದ ಕಾರ್ಖಾನೆಗಳು ನೀಡುವ ದರದಂತೆ ನಾವು ಕೂಡ ಹೆಚ್ಚಿನ ದರವನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಇಳುವರಿಯ ಕಬ್ಬನ್ನು ಕಳುಹಿಸಬೇಕು ಎಂದು ಮನವಿ ಮಾಡಿದರು.ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಕಾರ್ಖಾನೆಯಿಂದ ನಡೆಯುವ ಕಬ್ಬುನುರಿಸುವ ಕಾರ್ಯ ಯಶಸ್ವಿಯಾಗಿ ಸಾಗಲಿ, ಕಾರ್ಖಾನೆ ಹಂತ ಹಂತವಾಗಿ ಪ್ರಗತಿ ಹೊಂದಲಿ, ರೈತರಿಗೂ ಒಳ್ಳೆಯದರ ಸಿಗಲಿ, ಕಾರ್ಖಾನೆಯ ನೂತನ ನಿರ್ದೇಶಕರೂ ಕಾರ್ಖಾನೆಯ ಪ್ರಗತಿಯನ್ನು ಎತ್ತರ ಮಟ್ಟಕ್ಕೆ ಬಳಸುವ ಪ್ರಯತ್ನ ಮಾಡಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ನೂತನ ನಿರ್ದೇಶಕರಿಗೆ ಕಾರ್ಖಾನೆಯ ಪರವಾಗಿ ಸನ್ಮಾನಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ ಎಂ ಪಾಟೀಲ ಉಪಸ್ಥಿರಿದ್ದರು. ಜನರಲ್ ಮ್ಯಾನೇಜರ್‌ ಶಂಕರ ಗೋಟಖಿಂಡಿ, ಕಚೇರಿ ಅಧೀಕ್ಷಕ ಸುರೇಶ ಠಕ್ಕಣ್ಣವರ, ಕಬ್ಬು ಅಭಿವೃದ್ಧಿ ಅಧಿಕಾರಿ ಹಣಮಂತ ದರಿಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಗೂಳಪ್ಪ ಜತ್ತಿ ಸ್ವಾಗತಿಸಿದರು. ಸುರೇಶ್ ಟಕ್ಕಣ್ಣವರ ನಿರೂಪಿಸಿದರು. ಶಂಕರ ಗೋಟಖಿoಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ