ಮುಂಗಾರು ಹಂಗಾಮಿನಲ್ಲಿ ಜೋರು ಮಳೆ ಹಿಡಿದು ಥಂಡಿ ವಾತಾವರಣ ಸೃಷ್ಟಿಯಾಗುತ್ತಿದ್ದ ಮಲೆನಾಡಿನಲ್ಲಿ ಮಳೆಗಾಲದಲ್ಲೂ ಬಿಸಿಲು ಕಾಯುತ್ತಿದೆ. ಜಿಲ್ಲೆಯಲ್ಲಿ ಕಳೆದ ಏಪ್ರಿಲ್ನಲ್ಲಿ ಕೆಲ ದಿನ ಆರ್ಭಟಿಸಿದ ಮಳೆಯು ಮುಂಗಾರಿನಲ್ಲಿ ಮಾಯವಾಗಿದ್ದು, ಜೂ.1 ರಿಂದ 15 ವರೆಗೆ ಶೇ.47 ರಷ್ಟು ಮಳೆಯ ಕೊರತೆ ಎದುರಾಗಿದೆ.
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮುಂಗಾರು ಹಂಗಾಮಿನಲ್ಲಿ ಜೋರು ಮಳೆ ಹಿಡಿದು ಥಂಡಿ ವಾತಾವರಣ ಸೃಷ್ಟಿಯಾಗುತ್ತಿದ್ದ ಮಲೆನಾಡಿನಲ್ಲಿ ಮಳೆಗಾಲದಲ್ಲೂ ಬಿಸಿಲು ಕಾಯುತ್ತಿದೆ. ಜಿಲ್ಲೆಯಲ್ಲಿ ಕಳೆದ ಏಪ್ರಿಲ್ನಲ್ಲಿ ಕೆಲ ದಿನ ಆರ್ಭಟಿಸಿದ ಮಳೆಯು ಮುಂಗಾರಿನಲ್ಲಿ ಮಾಯವಾಗಿದ್ದು, ಜೂ.1 ರಿಂದ 15 ವರೆಗೆ ಶೇ.47 ರಷ್ಟು ಮಳೆಯ ಕೊರತೆ ಎದುರಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಅಬ್ಬರಿಸಿದ್ದ ಮಳೆ ಈಗ ಕೈ ಕೊಟ್ಟಿದೆ. ಹೀಗಾಗಿ ಮುಂಗಾರು ಆರಂಭಗೊಂಡರೂ ಜಿಲ್ಲೆಯಲ್ಲಿ ಬೇಸಿಗೆ ವಾತಾವರಣ ಮುಂದುವರೆದಿದೆ. ಮಲೆನಾಡು ಭಾಗದಲ್ಲಿಯೇ ಮುಂಗಾರು ಮಳೆ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಜೂನ್ ತಿಂಗಳ ಮೊದಲಾರ್ಧದಲ್ಲಿ ವಾಡಿಕೆಯಂತೆ ಸುರಿಯಬೇಕಿದ್ದ ಮಳೆಯ ಪ್ರಮಾಣ ಭಾರೀ ಇಳಿಕೆಯಾಗಿದೆ. ಇನ್ನೂ ಮಳೆ ಬಾರದ ಕಾರಣ ಜಿಲ್ಲೆಯ ಜಲಾಯಶಗಳು ಬರಿದಾಗುತ್ತಿವೆ. ಇತ್ತ ಮುಂಗಾರು ಪೂರ್ವದಲ್ಲಿ ಬಿತ್ತನೆ ಹುಮ್ಮಸ್ಸಿನಲ್ಲಿದ್ದ ರೈತರು ಈಗ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದು, ಮಳೆಗಾಗಿ ಮುಗಿಲಿನತ್ತ ನೋಡುತ್ತಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದವರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಮಳೆಯ ಈ ಪರಿಸ್ಥಿತಿಯಿಂದಾಗಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಕುಂಟಿತಗೊಂಡಿದೆ. ಜೂನ್ 17 ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 235.6 ಸೆಂ.ಮೀ. ಆಗಬೇಕಿತ್ತು. ಆದರೆ ಸುರಿದಿದ್ದು ಕೇವಲ 49 ಸೆ. ಮೀ. ಮಾತ್ರ!
ಭದ್ರಾವತಿ ತಾಲ್ಲೂಕಿನಲ್ಲಿ ಅತಿ ಕಡಿಮೆ ಮಳೆ ಸುರಿದಿದೆ. ವಾಡಿಕೆಯಂತೆ 15 ದಿನಗಳಲ್ಲಿ ಸರಾಸರಿ 10.7 ಸೆಂ.ಮೀ ಮಳೆ ಆಗಬೇಕಿದ್ದು, ಬರೀ 1.7 ಸೆಂ.ಮೀ.ನಷ್ಟು ಸುರಿದಿದೆ. ಶಿಕಾರಿಪುರದಲ್ಲಿ 14.5 ಸೆಂ.ಮೀ. ವಾಡಿಕೆ ಮಳೆ ಇದ್ದು, ಬರೀ 3.76 ಸೆಂ.ಮೀ.ನಷ್ಟು ಬಿದ್ದಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ ವಾಡಿಕೆ 11.16 ಸೆಂ.ಮೀ. ಮಳೆ ಆಗಬೇಕಿದ್ದು, ಬರೀ 4.86 ಸೆಂ.ಮೀ. ಸುರಿದಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ 56.48 ಸೆಂ.ಮೀ. ವರ್ಷಧಾರೆ ಆಗಬೇಕಿದ್ದು, 7.81 ಸೆಂ.ಮೀ. ಸುರಿದಿದೆ. ಸಾಗರ ತಾಲ್ಲೂಕಲ್ಲಿ 49 ಸೆಂ.ಮೀ. ವಾಡಿಕೆ ಮಳೆ ಇದ್ದು, ಬರೀ 14.5 ಸೆಂ.ಮೀ. ಸುರಿದಿದೆ. ಸೊರಬ 27.5 ಸೆಂ.ಮೀ. ಮಳೆ ಆಗಬೇಕಿದ್ದು, ಕೇವಲ 4.5 ಸೆಂ.ಮೀ ಬಿದ್ದಿದೆ. ಮಳೆಯ ತವರು ಹೊಸನಗರ ತಾಲೂಕಿನಲ್ಲಿ ಜೂನ್ ಮಧ್ಯದವರೆಗೆ 66.1 ಸೆಂ.ಮೀ. ಮಳೆ ಬೀಳಬೇಕಿದ್ದು, 11.71 ಸೆಂ.ಮೀ. ಸುರಿದಿದೆ.
ಬರಿದಾಗುತ್ತಿವೆ ಜಲಾಶಯಗಳು:
ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡರೂ ಮಳೆರಾಯನ ಆಗಮನವಾಗದ ಕಾರಣ ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಭದ್ರಾ ಜಲಾಶಯದಲ್ಲಿ ದಿನೇದಿನೇ ನೀರಿನಮಟ್ಟ ಕಡಿಮೆ ಆಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಇಲ್ಲದೇ ಒಳಹರಿವು ಪೂರ್ತಿ ಕಡಿಮೆ ಆಗಿದೆ. ಜಲಾಶಯದ ಗರಿಷ್ಟ ನೀರಿನ ಮಟ್ಟ 186 ಅಡಿ. ಜೂ.17 ಕ್ಕೆ 136.7 ಅಡಿಯಷ್ಟು ನೀರಿನ ಸಂಗ್ರಹ ಇದೆ. ಒಳಹರಿವು 291 ಕ್ಯುಸೆಕ್ ಇದ್ದು, ಅಷ್ಟೇ ಪ್ರಮಾಣದ ಹೊರಹರಿವು ಇದೆ. ಕಳೆದ ವರ್ಷ ಇದೇ ದಿನಕ್ಕೆ ಜಲಾಶಯದಲ್ಲಿ 145.5 ಅಡಿ ನೀರಿತ್ತು. ಅಂದು ಒಳಹರಿವು 6999 ಕ್ಯುಸೆಕ್ ಇದ್ದು, ಹೊರಹರಿವು 1270 ಕ್ಯುಸೆಕ್ ಇತ್ತು.
ಗಾಜನೂರಿನ ತುಂಗಾ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 3.24 ಟಿಎಂಸಿ ಆಗಿದ್ದು, ಸದ್ಯ 2.41 ಟಿಎಂಸಿ ನೀರಿದೆ. ಕಳೆದ ವರ್ಷ ಜೂನ್ ಆರಂಭದಲ್ಲೇ ಈ ಜಲಾಶಯ ಭರ್ತಿಯಾಗಿತ್ತು. ಇನ್ನೂ 1819 ಅಡಿ ನೀರು ಸಂಗ್ರಹ ಸಾಮರ್ಥ್ಯದ ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯದಲ್ಲಿ ಜೂ.17ಕ್ಕೆ 1748.20 ಅಡಿಯಷ್ಟು ನೀರಿದ್ದು, ನೀರಿನ ಸಂಗ್ರಹ 16.78 ಟಿಎಂಸಿ (ಶೇ.11.07) ಮಾತ್ರ ಇದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 1769.70 ಅಡಿ ನೀರಿನ ಸಂಗ್ರಹವಿತ್ತು. ಆಗ ಜಲಾಶಯದಲ್ಲಿ 39.15 ಟಿಎಂಸಿ(ಶೇ.25.82) ನೀರಿತ್ತು. ಮಳೆ ಬಾರದೆ ಮಂಕಾದ ಕೃಷಿ ಚಟುವಟಿಕೆ
ಜಿಲ್ಲೆಯಲ್ಲಿ ಸದ್ಯ ಬರಗಾರದ ಛಾಯೆ ಆವರಿಸಿರುವುದರಿಂದ ಮಳೆ ಬಾರದೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯೂ ಮಂಕಾಗಿದೆ.
ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆ ಜೊಳ ಈ ಬಾರಿ 45807 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ 5485 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಮುಗಿದೆ. 66200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಗುರಿಯನ್ನು ಹೊಂದಲಾಗಿದ್ದು, ಈವರೆಗೆ 2415 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಈವರೆಗೆ ಶೇ.6.96 ರಷ್ಟು ಮಾತ್ರ ಬಿತ್ತನೆ ಕಾರ್ಯ ಮುಗಿದಿದೆ. ಮಳೆ ಕೊರತೆ ಇದೇ ರೀತಿ ಮುಂದುವರಿದರೆ ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನೆಡೆಯಾಗಲಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಜಿಲ್ಲೆಯಲ್ಲಿ ಬಿತ್ತನೆಗೆ ಇನ್ನೂ ಅವಕಾಶ ಇದೆ. ರೈತರು ಆತಂಕ ಪಡದೆ ತೇವಾಂಶ ನೋಡಿಕೊಂಡು ಬಿತ್ತನೆ ಮಾಡುವುದು ಉತ್ತಮ. ಭತ್ತ ನಾಟಿ ಮಾಡಲು ಜಿಲ್ಲೆಯಲ್ಲಿ ಜುಲೈ 15 ರವರೆಗೆ ಅವಕಾಶ ಇದೆ. ಈಗ ಬಿತ್ತನೆ ಆಗಿರುವ ಭತ್ತ, ಮೆಕ್ಕೆಜೋಳಕ್ಕೆ ವಾರದಲ್ಲಿ ಮಳೆ ಬೇಕಿದೆ.
ಡಾ.ಕಿರಣ್ ಕುಮಾರ್ ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಶಿವಮೊಗ್ಗ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.