ತೆರವುಗೊಳಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ

KannadaprabhaNewsNetwork | Published : Jul 19, 2024 12:46 AM

ಸಾರಾಂಶ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ರೈಲ್ವೆ ನಿಲ್ದಾಣದ ವಾಹನ ನಿಲ್ದಾಣದ ಗುತ್ತಿಗೆದಾರ ಪಿ.ಮೂರ್ತಿ ಮಾತನಾಡಿದರು. ಶಂಕರ್ ದಡದಹಳ್ಳಿ, ಅನಂತಕುಮಾರ್, ಮಧುಸೂದನ್, ನಾಗರಾಜು ಇದ್ದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ರೈಲ್ವೆ ನಿಲ್ದಾಣದ ಬಳಿ ಅನಧಿಕೃತವಾಗಿ ಕೃಷಿ ಜಮೀನಿನಲ್ಲಿ ಮನೆ ಹಾಗೂ ವಾಹನ ನಿಲ್ದಾಣ ಶೆಡ್ ಹಾಕಿಕೊಂಡು ನನಗೆ ನಷ್ಟವನ್ನುಂಟು ಮಾಡುತ್ತಿದ್ದು, ಇದನ್ನು ತೆರವುಗೊಳಿಸದಿದ್ದರೆ ಜಿಲ್ಲಾಡಳಿತದ ಮುಂಭಾಗ ಕುಟುಂಬ ಸಮೇತ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ರೈಲು ನಿಲ್ದಾಣದ ವಾಹನ ನಿಲ್ದಾಣದ ಗುತ್ತಿಗೆದಾರ ಪಿ.ಮೂರ್ತಿ ಹೇಳಿದರು.ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ೨೦೦೯ ರಿಂದ ರೈಲ್ವೆ ನಿಲ್ದಾಣದ ವಾಹನ ನಿಲ್ದಾಣದ ಅಧಿಕೃತ ಗುತ್ತಿಗೆದಾರನಾಗಿದ್ದು ಮೂರು ತಿಂಗಳಿಗೊಮ್ಮೆ ರೈಲ್ವೆ ಇಲಾಖೆಗೆ ಜಿಎಸ್‌ಟಿ ಸೇರಿಸಿ ೧,೭೭,೭೨೫ ರು. ಪಾವತಿಸುತ್ತಿದ್ದೇನೆ ಎಂದರು. ಈ ರೈಲ್ವೆ ನಿಲ್ದಾಣದ ಅನತಿ ದೂರದಲ್ಲಿ ಮಲ್ಲೇಶ್ ಎಂಬಾತ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಪಡೆಯದೇ ನನಗೆ ನಷ್ಟವನ್ನುಂಟು ಮಾಡುತ್ತಿದ್ದಾರೆ. ಇದರಿಂದಾಗಿ ರೈಲ್ವೆ ಇಲಾಖೆಗೆ ಅಸಲನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಮಲ್ಲೇಶ್‌ಗೆ ನಗರಸಭೆ ಒಂದು ವರ್ಷದವರೆಗೆ ಷರತ್ತುಬದ್ಧ ಪರವಾನಿಗೆ ನೀಡಿತ್ತು. ಈಗ ಅದು ರದ್ದಾಗಿದೆ, ಈ ಒಂದು ಗುಂಟೆ ಜಮೀನು ಕಾನೂನು ಬದ್ಧವಾಗಿ ಅನ್ಯಕ್ರಾಂತವಾಗಿಲ್ಲ, ಅಕ್ಕಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಂಡು ಕ್ಯಾಂಟೀನ್ ಮತ್ತು ವಾಹನ ನಿಲ್ದಾಣದ ಶೆಡ್‌ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.ಹಲವಾರು ಬಾರಿ ತಹಸೀಲ್ದಾರ್ ಮತ್ತು ನಗರಸಭಾ ಆಯುಕ್ತರು ವಾಹನ ನಿಲ್ದಾಣವನ್ನು ತೆರವುಗೊಳಿಸಬೇಕೆಂದು ನೋಟಿಸ್ ನೀಡಿದ್ದರೂ ಯಾವುದಕ್ಕೂ ಬಗ್ಗದೆ ಮುಂದುವರಿಯುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ತೆರವುಗೊಳಿಸಲು ಸ್ಥಳಕ್ಕೆ ಭೇಟಿ ನೀಡಿದಾಗ ಮಲ್ಲೇಶ್ ದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿ ವಾಪಸು ಕಳುಹಿಸಿದ್ದಾರೆ ಎಂದರು. ರೈಲ್ವೆ ಇಲಾಖೆಯ ವಾಣಿಜ್ಯ ಪ್ರಬಂಧಕರು ಈ ಅನಧಿಕೃತ ವಾಹನ ನಿಲ್ದಾಣವನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗೆ, ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ. ಇದನ್ನು ಪ್ರಶ್ನಿಸಿ ಮಲ್ಲೇಶ್ ಹೈಕೋರ್ಟಿಗೆ ಮೇಲನ್ಮವಿ ಸಲ್ಲಿಸಿದ್ದಾರೆ ಎಂದರು.ಕಾನೂನು ಬಾಹಿರವಾಗಿ ಅನಧಿಕೃತವಾಗಿ ಕೃಷಿ ಜಮೀನಿನಲ್ಲಿ ಮನೆ ಹಾಗೂ ವಾಹನ ನಿಲ್ದಾಣ ಶೆಡ್ ಹಾಕಿಕೊಂಡಿರುವ ಮಲ್ಲೇಶ್ ವಿರುದ್ಧ ಮೊಕದ್ದಮೆ ದಾಖಲಿಸಿ, ಕ್ಯಾಂಟೀನ್ ಹಾಗೂ ವಾಹನ ನಿಲ್ದಾಣವನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಕುಟುಂಬ ಸಮೇತ ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮೂರ್ತಿ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಂಕರ್ ದಡದಹಳ್ಳಿ, ಅನಂತಕುಮಾರ್, ಮಧುಸೂದನ್, ನಾಗರಾಜು ಇದ್ದರು.

Share this article