ಕನ್ನಡಪ್ರಭ ವಾರ್ತೆ ಟೇಕಲ್
ಟೇಕಲ್‌ನ ಕೆ.ಜಿ.ಹಳ್ಳಿಯ ಸರ್ವೇ ನಂ.73 ರಲ್ಲಿ ಸುಮಾರು ೫ ಕೋಟಿ ರು. ವೆಚ್ಚದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಐಟಿಐ ಕಾಲೇಜು ಇನ್ನು 6 ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಶಾಸಕ ಕೆ.ವೈ. ನಂಜೇಗೌಡರು ತಿಳಿಸಿದರು. ಅವರು ಕೆ.ಜಿ.ಹಳ್ಳಿ ಸರ್ವೇ ನಂ.73ರಲ್ಲಿ ಒಂದೇ ಸೂರಿನಡಿ ಎಲ್ಲಾ ಸರ್ಕಾರಿ ಕಚೇರಿಗಳು ಬರುವಂತೆ ನಿರ್ಮಿಸುತ್ತಿರುವ ಐಟಿಐ ಕಾಲೇಜು ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು, ಸ್ಥಳದಲ್ಲೇ ಇದ್ದ ಗುತ್ತಿಗೆದಾರರು ಹಾಗೂ ಇಂಜಿನಿಯರ್‌ರವರಿಗೆ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಬೇಕೆಂದು ಸೂಚಿಸಿದರು. 38 ಎಕರೆ ಪ್ರದೇಶದಲ್ಲಿ ಬೈಪಾಸ್, ಕಾಲೇಜು, ಪ್ರಾಥಮಿಕ ಶಾಲೆ, ನಾಡಕಚೇರಿ, ಹಾಸ್ಟೆಲ್, ರೈತಭವನ, ಸ್ಟೇಡಿಯಂ ಕಟ್ಟಲು ಆಯ್ಕೆ ಮಾಡಿದ್ದು, ಇನ್ನೊಂದು ವರ್ಷದಲ್ಲಿ ಈ ಸ್ಥಳದಲ್ಲೇ ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಕಡೆ ಸಿಗುವಂತಾಗುತ್ತವೆ. ಸರ್ಕಾರದಿಂದ ನಮ್ಮ ತಾಲೂಕಿನಲ್ಲಿ ಕೆಲವು ಕಡೆ ಇಂಡಸ್ಟ್ರಿಯಲ್‌ಗಳನ್ನು ತೆರೆಯಲು ಪ್ರಸ್ತಾವನೆ ಬಂದಿದ್ದು, ಅದು ಟೇಕಲ್ ವ್ಯಾಪ್ತಿಯಲ್ಲಿ ಬರುವ ಸಾಧ್ಯತೆ ಇದೆ. ಅದಕ್ಕಾಗಿ ಸ್ಥಳ ನಿಗದಿ ಮಾಡುವ ಕಾರ್ಯ ಪ್ರಾರಂಭವಾಗಿದೆ. ಸಚಿವ ಸುಧಾಕರ್‌ರವರ ಬಳಿ ನಮ್ಮ ತಾಲೂಕಿಗೆ ಡಿಪ್ಲೋಮಾ ಕಾಲೇಜು ಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದು, ಅವರು ಮುಂದಿನ ಬಜೆಟ್‌ನಲ್ಲಿ ಮಂಜೂರು ಮಾಡಿಕೊಡಲು ಸಹಕರಿಸುವುದಾಗಿ ತಿಳಿಸಿದ್ದಾರೆ ಎಂದರು.
ಟೇಕಲ್ ಮತ್ತು ಮಾಸ್ತಿಯಲ್ಲಿ 5 ಎಕರೆ ಸ್ಥಳದಲ್ಲಿ ದೊಡ್ಡದಾದ ಮಾದರಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಯೋಜನೆ ಬಂದಿದ್ದು, ಸಾರ್ವಜನಿಕರ ಆರೋಗ್ಯ ಸೇವೆಗೆ ಕೆಲಸ ಪ್ರಾರಂಭವಾಗುತ್ತದೆ. ಈ ಯೋಜನೆಯನ್ನು ಕೆ.ಜಿ.ಹಳ್ಳಿ ಸರ್ವೇ ನಂ.73 ರಲ್ಲಿ 5 ಎಕರೆ ಪ್ರದೇಶದಲ್ಲಿ ಗುರುತಿಸಲಾಗಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಹಲವಾರು ಯೋಜನೆಗಳು ನಮ್ಮ ತಾಲೂಕಿಗೆ ಬರುತ್ತಿವೆ. ಟೇಕಲ್‌ನ ಕೆ.ಜಿ. ಹಳ್ಳಿ ಹೋಬಳಿಯು ಪ್ರಮುಖ ಕೇಂದ್ರ ಸ್ಥಾನವಾಗಿದ್ದು, ಮುಂದಿನ ದಿನಗಳಲ್ಲಿ ಮಾದರಿ ಹೋಬಳಿಯನ್ನಾಗಿ ಮಾಡಲಾಗುತ್ತದೆ ಎಂದರು.ಈ ಬಗ್ಗೆ ಸ್ಥಳೀಯ ಕೆ.ಜಿ.ಹಳ್ಳಿ ಗ್ರಾಪಂನವರು ತಮ್ಮ ನರೇಗಾ ಅನುದಾನದಡಿ ಎಲ್ಲಾ ಸರ್ಕಾರಿ ಕಟ್ಟಡಗಳ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಮಾಡಿದರೆ ಸೂಕ್ತವೆಂದು ಸ್ಥಳದಲ್ಲಿದ್ದ ಕೆ.ಜಿ.ಹಳ್ಳಿ ಗ್ರಾಪಂ ಅಧ್ಯಕ್ಷ ಎಸ್.ಆರ್.ಯಲ್ಲಪ್ಪರವರಿಗೆ ತಿಳಿಸಿದರು.
ಸರ್ವೇ ನಂ.73 ರಲ್ಲಿ ಅಕ್ರಮ ಮನೆ ನಿರ್ಮಾಣ:ಇದೇ ವೇಳೆ ಶಾಸಕ ಕೆ.ವೈ.ನಂಜೇಗೌಡರು ಸರ್ವೇ ನಂ.73 ರಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸುತ್ತಿರುವ ದೂರು ಬಂದಿದ್ದ ಹಿನ್ನೆಲೆ ಹಾಗೂ ಇಲ್ಲಿ ಸ್ಥಳಗಳನ್ನು 2 ರಿಂದ 3 ಲಕ್ಷ ರುಪಾಯಿಗಳಿಗೆ ಮಾರಾಟಕ್ಕಿಟ್ಟಿದ್ದಾರೆಂದು ಮಾಹಿತಿ ಪಡೆದು ಶಾಸಕರು ಕೆಂಡಾಮಂಡಲವಾದರು. ನಾವು ಸರ್ಕಾರಿ ಕಟ್ಟಡಗಳಿಗೆ ಸ್ಥಳವನ್ನು ಕಾಯ್ದಿರಿಸಿದರೆ ಈ ರೀತಿ ಮಾಡುವುದು ಸರಿಯಲ್ಲವೆಂದು ತಕ್ಷಣವೇ ತಹಸೀಲ್ದಾರ್ ರಮೇಶ್ ಜೊತೆ ಪೋನ್ ಮೂಲಕ ಮಾತನಾಡಿ ಕ್ರಮಕೈಗೊಂಡು ಸ್ಥಳ ಭದ್ರಪಡಿಸಿ ಎಂದು ತಿಳಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಎಚ್.ಹನುಮಂತಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಟಿ.ಎಂ. ಅಶೋಕಕುಮಾರ್, ಕೆ.ಜಿ. ಹಳ್ಳಿ ಗ್ರಾಪಂ ಅಧ್ಯಕ್ಷ ಎಸ್.ಆರ್.ಯಲ್ಲಪ್ಪ, ಗ್ರಾಪಂ ಸದಸ್ಯರ ಮುರುಗೇಶ ಮುಂತಾದವರು ಉಪಸ್ಥಿತರಿದ್ದರು.