ಅಪಾಯಕಾರಿ ಸ್ಥಳ ಗುರುತಿಸಿ ಮುನ್ನೆಚ್ಚರಿಕೆ ಕೈಗೊಳ್ಳಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

KannadaprabhaNewsNetwork |  
Published : Jul 19, 2024, 12:46 AM IST
ಸಭೆ ನಡೆಸಿದರು | Kannada Prabha

ಸಾರಾಂಶ

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ತಮಗೆ ವಹಿಸಿದ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ವಿಕೋಪ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿ ಲಕ್ಷ್ಮೀಪ್ರಿಯಾ ಎಚ್ಚರಿಕೆ ನೀಡಿದರು.

ಕಾರವಾರ: ಜಿಲ್ಲೆಯಲ್ಲಿ ಅಪಾಯಕಾರಿಯಾಗಿರುವ ಶಾಲೆಗಳು ಅಂಗನವಾಡಿಗಳು, ಜನವಸತಿ ಪ್ರದೇಶಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ, ಅಲ್ಲಿ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡು ಎರಡು ದಿನದಲ್ಲಿ ವರದಿ ನೀಡುವಂತೆ ಕಂದಾಯ ಇಲಾಖೆಯ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿರುವ ಶಾಲೆಗಳು ಮತ್ತು ಅಂಗನವಾಡಿಗಳ ಸಮೀಪ ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳು, ಶಿಥಿಲವಾದ ಕಾಂಪೌಂಡ್, ಶಾಲಾ ಕಟ್ಟಡ ಹಾಗೂ ಗುಡ್ಡ ಕುಸಿತ ಸಂಭವಿಸುವ ಪ್ರದೇಶಗಳ ಬಳಿಯಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಆ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ಕಾಳಜಿ ಕೇಂದ್ರಗಳನ್ನು ಗುರುತಿಸಿಟ್ಟುಕೊಂಡು, ಈ ಕುರಿತು ಸಂಪೂರ್ಣ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಹಿ ಮಾಡಿ ದೃಢೀಕರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಗಳಿಗೆ ಮತ್ತು ಕಾಳಜಿ ಕೇಂದ್ರಗಳಿಗೆ ತೆರಳುವಂತೆ ಲಿಖಿತವಾಗಿ ಸೂಚನೆಗಳನ್ನು ನೀಡಿ, ಅವರಿಂದ ಸಹಿ ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ಗ್ರಾಮಗಳ ಪ್ರತಿಯೊಂದು ಮನೆಗಳನ್ನು ಸರ್ವೆ ಮಾಡುವಂತೆ ಹಾಗೂ ಎರಡು ದಿನಗಳಲ್ಲಿ ದೃಢೀಕೃತ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯ ಯಾವುದೇ ಅಧಿಕಾರಿಗಳು ಕೇಂದ್ರ ಬಿಟ್ಟು ತೆರಳದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲ ತಹಸೀಲ್ದಾರ್‌ಗಳು ಮತ್ತು ಉಪ ವಿಭಾಗಾಧಿಕಾರಿಗಳ ವಾಹನಗಳಿಗೆ ತುರ್ತು ಸಂಪರ್ಕಗಾಗಿ ವಯರ್‌ಲೆಸ್‌ ಸಾಧನಗಳನ್ನು ಅಳವಡಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಲಾ ಮಕ್ಕಳಿಗೆ ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಕುರಿತಂತೆ ಸೂಕ್ತ ಅರಿವು ಮೂಡಿಸುವಂತೆ ಮತ್ತು ಇಂತಹ ಸಮಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ತಮ್ಮ ಅಗತ್ಯ ವಸ್ತುಗಳನ್ನು, ದಾಖಲೆಗಳನ್ನು ಸಂರಕ್ಷಿಸಿಕೊಳ್ಳುವ ವಿಧಾನಗಳ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕುರಿತು ಮಾಹಿತಿ ಶಿಕ್ಷಣ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಲುಷಿತ ಕುಡಿಯುವ ನೀರಿನಿಂದ ಯಾವುದೇ ರೋಗಗಳು ಹರಡದಂತೆ ಎಲ್ಲ ಜಲಮೂಲಗಳನ್ನು ಪರೀಕ್ಷಿಸಿ ವರದಿ ನೀಡುವಂತೆ ಹಾಗೂ ಆರೋಗ್ಯ ಇಲಾಖೆಯಿಂದ ಎಲ್ಲ ಔಷಧಗಳ ದಾಸ್ತಾನು ಸಮರ್ಪಕವಾಗಿರುವಂತೆ ಮತ್ತು ಆ್ಯಂಬುಲೆನ್ಸ್‌ಗಳು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ತಮಗೆ ವಹಿಸಿದ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ವಿಕೋಪ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಎಲ್ಲ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಸಮ್ವನಯದಿಂದ ಕಾರ್ಯನಿರ್ವಹಿಸಿ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಡಿಎಫ್‌ಒ ರವಿಶಂಕರ್, ಎ.ಎಸ್ಪಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ