ಹುಬ್ಬಳ್ಳಿ:
ಮನುಷ್ಯ ಇಂದು ಔಷಧಗಳಿಗೆ ದಾಸನಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಆದರೆ, ಯಾವುದೇ ರೋಗ ಬರದಂತೆ ತಡೆಗಟ್ಟಲು ಉಪವಾಸ ಒಂದು ಅತ್ಯುತ್ತಮ ಮುಂಜಾಗ್ರತಾ ಚಿಕಿತ್ಸೆಯಾಗಿದೆ ಎಂದು ಮನಗುಂಡಿಯ ನಿಸರ್ಗ ಚಿಕಿತ್ಸಾ ತಜ್ಞ ಶ್ರೀ ಬಸವಾನಂದ ಸ್ವಾಮೀಜಿ ಹೇಳಿದರು.ಇಲ್ಲಿನ ಲಿಂಗರಾಜ ನಗರದಲ್ಲಿ ನಡೆದ ದಸರಾ-೨೦೨೫ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಉಪವಾಸ: ಆರೋಗ್ಯಕ್ಕಾಗಿ? ಅಥವಾ ದೇವರಿಗಾಗಿ?ವಿಷಯದ ಕುರಿತು ಪ್ರವಚನ ನೀಡಿದರು.
ಕಾಯಿಲೆಗಳ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೇ ಕೈ ಚೆಲ್ಲಿ ಕುಳಿತಿದೆ. ಸಂಸ್ಥೆಯ ೨೦೨೩ರ ಸಮೀಕ್ಷಾ ವರದಿಯಲ್ಲಿ ೧೦,೦೦೦ ಕಾಯಿಲೆಗಳು ಮನುಷ್ಯನನ್ನು ಬಾಧಿಸುತ್ತಿವೆ. ಇವುಗಳಲ್ಲಿ ಶೇ.5ರಷ್ಟು ಕಾಯಿಲೆಗಳಿಗೆ ಮಾತ್ರ ಔಷಧಿ ಲಭ್ಯವಿದೆ. ಉಳಿದ ಕಾಯಿಲೆಗಳಿಗೆ ಔಷಧಿ ಇಲ್ಲ ಎಂದು ಸಾರಿದೆ. ಇಂಥ ಸಂದರ್ಭದಲ್ಲಿ ಪರ್ಯಾಯ ಚಿಕಿತ್ಸೆಗಳಲ್ಲಿ ಒಂದಾದ ನಿಸರ್ಗ ಚಿಕಿತ್ಸೆಯ ಉಪವಾಸ ಚಿಕಿತ್ಸೆಯು ಯಾವುದೇ ರೋಗ ಬರದಂತೆ ತಡೆಗಟ್ಟ ಬಲ್ಲದು. ಈಗಾಗಲೇ ಬಂದಿರುವ ಹಲವಾರು ರೋಗಗಳನ್ನು ಗುಣಪಡಿಸಬಲ್ಲದು ಎಂಬುದನ್ನು ಹಲವಾರು ಸಂಶೋಧನೆಗಳು ಸಾಬೀತುಪಡಿಸಿವೆ ಎಂದರುನವಜಾತ ಶಿಶುವಿಗೂ ಮಧುಮೇಹದಂಥ ಕಾಯಿಲೆಗಳು ಆವರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಔಷಧಿ ರಹಿತ, ವೆಚ್ಚ ರಹಿತ, ಮನೆಯಲ್ಲೇ ಮಾಡಬಹುದಾದ ಉಪವಾಸದ ವಿಧಾನ ಅಳವಡಿಸಿಕೊಳ್ಳುವ ಮೂಲಕ ಎಲ್ಲರೂ ಆರೋಗ್ಯವಂತರಾಗಿ ಬಾಳಬೇಕೆಂದು ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ. ಕೆ.ಎಸ್. ಕೌಜಲಗಿ ಮಾತನಾಡಿದರು. ಇದೇ ವೇಳೆ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ವಚನ ಸಂಗೀತ ಹಾಗೂ ಭಾವಗೀತೆ ಕಾರ್ಯಕ್ರಮ ನಡೆಯಿತು. ಮೂರುಸಾವಿರ ಮಠದ ಮಹಿಳಾ ಕಾಲೇಜಿನ ಸಂಗೀತ ಪ್ರಾಧ್ಯಾಪಕಿ ಡಾ. ಜ್ಯೋತಿಲಕ್ಷ್ಮೀ ಡಿ.ಪಿ. ಹಾಗೂ ಸಂಗಡಿಗರು ವಚನ, ಕರ್ಕಿ ಮತ್ತಿತರ ಕವಿಗಳ ಭಾವಗೀತೆ ಪ್ರಸ್ತುತಪಡಿಸಿದರು. ಪೌರಕಾರ್ಮಿಕರ ದಿನಾಚರಣೆ ನಿಮಿತ್ತ ೧೩ ಪೌರಕಾರ್ಮಿಕರನ್ನು ಬಡಾವಣೆಯ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.ವಿದ್ಯಾ ಮೂರಶಿಳ್ಳಿನ ಸ್ವಾಗತಿಸಿದರು,. ಸುನಂದಾ ಮೆಣಸಿನಕಾಯಿ ನಿರೂಪಿಸಿದರು. ನೇತ್ರಾ ದೇಸಾಯಿ ವಂದಿಸಿದರು.