ಕನ್ನಡಪ್ರಭ ವಾರ್ತೆ ಬೇಲೂರು.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದ ಮುಖ್ಯರಸ್ತೆಯಲ್ಲಿ ಮಂಗಳವಾರ ಕಾರಿನಲ್ಲಿ ಬಂದ ನವ ವಿವಾಹಿತ ಅಳಿಯ, ಮಾವನ ಎದುರಲ್ಲೇ ತನ್ನ ಪತ್ನಿಯನ್ನು ಅಪಹರಣ ಮಾಡಿದ್ದಾನೆ. ಅಲ್ಲದೆ, ಅಳಿಯನ ಕಾರನ್ನು ತಡೆದು ನಿಲ್ಲಿಸಲು ಹೋಗಿ, ಡೋರ್‌ನಲ್ಲಿ ನೇತಾಡುತ್ತಿದ್ದ ಮಾವನನ್ನು ರಸ್ತೆಯುದ್ದಕ್ಕೂ ಸುಮಾರು 200 ಮೀ. ದೂರ ಎಳೆದೊಯ್ದಿದ್ದಾನೆ. ಈ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.ಚನ್ನರಾಯಪಟ್ಟಣದ ಯುವಕ, ಕೆಲ ತಿಂಗಳ ಹಿಂದೆ ಅರೇಹಳ್ಳಿಯ ಹುಡುಗಿಯನ್ನು ಪ್ರೀತಿಸಿದ್ದ. ಪೋಷಕರ ನಿರಾಕರಣೆ ನಡುವೆಯೂ ಮದುವೆ ಆಗಿದ್ದ ಎನ್ನಲಾಗಿದೆ. ಆದರೆ, ಪೋಷಕರು ಮಗಳನ್ನು ಒಪ್ಪಿಸಿ, ಹುಡುಗನ ಮನೆಯಿಂದ ವಾಪಸ್ ಕರೆ ತಂದಿದ್ದರು. ನಂತರ, ಪತಿ ತನ್ನ ಪತ್ನಿಯನ್ನು ಮರಳಿ ಕರೆದೊಯ್ಯಲು ಯತ್ನಿಸಿದನಾದರೂ ಆಗಿರಲಿಲ್ಲ.
ಮಂಗಳವಾರ ಬೆಳಗ್ಗೆ ತಂದೆ-ಮಗಳು ರಸ್ತೆಯಲ್ಲಿ ನಡೆದು ಹೋಗುವಾಗ ಕಾರಿನಲ್ಲಿ ಬಂದ ಯುವಕ, ತನ್ನ ಪತ್ನಿಯನ್ನು ಕಾರಿನೊಳಗೆ ಎಳೆದೊಯ್ದು, ಚಲಾಯಿಸಲು ಮುಂದಾದ. ಪಕ್ಕದಲ್ಲೇ ಇದ್ದ ಮಾವ ಕಾರನ್ನು ತಡೆದು ನಿಲ್ಲಿಸಲು ಮುಂದಾದಾಗ ಕಾರು ನಿಲ್ಲಿಸದೆ, ಅವರು ಬಾಗಿಲು ಹಿಡಿದು ನೇತಾಡುತ್ತಿದ್ದರೂ ಕಾರು ಚಲಾಯಿಸಿದ್ದಾನೆ. ಈ ವೇಳೆ, ಮಾವ ಕಾರಿನ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡು, ಹಾಗೆಯೇ ನೇತಾಡಿದ. ಆದರೆ, ಕಾರನ್ನು ವೇಗವಾಗಿ ಓಡಿಸಿದ ಯುವಕ ಡೋರ್‌ನಲ್ಲಿ ನೇತಾಡುತ್ತಿದ್ದ ಮಾವನನ್ನು ಸುಮಾರು 200 ಮೀಟರ್ ದೂರ, ಪಟ್ಟಣದ ಪೊಲೀಸ್ ಠಾಣೆ ವೃತ್ತದವರೆಗೂ ಎಳೆದೊಯ್ದಿದ್ದಾನೆ. ನಂತರ, ಆತನ ಮಾವ ವೃತ್ತದ ತಿರುವಿನಲ್ಲಿ ಕಾರ್ ಡೋರಿನಿಂದ ಆಯತಪ್ಪಿ ನೆಲಕ್ಕೆ ಬಿದ್ದಿದ್ದು, ದೇಹದ ಹಲವೆಡೆ ಗಾಯಗಳಾಗಿವೆ. ಯುವಕ, ತನ್ನ ಪತ್ನಿಯನ್ನು ಕರೆದೊಯ್ದಿದ್ದಾನೆ. ಸಾರ್ವಜನಿಕರು ಈ ದೃಶ್ಯವನ್ನು ದಿಗ್ಬ್ರಾಂತರಾಗಿ ನೋಡುತ್ತಿದ್ದರು.