ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ದಂಡಿನಶಿವರದ ಸರ್ಕಾರಿ ಪ್ರೌಢಶಾಲೆಯಲ್ಲಿ 1998- 99ನೇ ಸಾಲಿನಲ್ಲಿ ವಿದ್ಯಾರ್ಜನೆ ಮಾಡಿದ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ತಾವು ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಸರಿಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ತಮ್ಮೊಂದಿಗೆ ಪಾಠ ಕಲಿತ ಎಲ್ಲಾ ವಿದ್ಯಾರ್ಥಿಗಳೂ ಇಂದು ಉತ್ತಮ ಹಂತದಲ್ಲಿದ್ದಾರೆ. ಪ್ರಗತಿಪರ ರೈತರಾಗಿದ್ದಾರೆ. ನೂರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಕೆಲವರು ರಾಜಕಾರಣಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಿನಲ್ಲಿ ಭೂಮಿಗೆ ಭಾರವಾಗದೇ, ಸಮಾಜಕ್ಕೆ ಹೊರೆಯಾಗದೇ ಜೀವನ ಸಾಗಿಸುತ್ತಿದ್ದಾರೆ ಎಂಬುದೇ ತಮಗೆ ಸಂತಸ ತಂದಿರುವ ಸಂಗತಿ ಎಂದರು. ಗುರುವಾದವರು ಪ್ರತಿ ದಿನವೂ ತಾನೊಬ್ಬ ವಿದ್ಯಾರ್ಥಿ ಎಂಬ ರೀತಿಯಲ್ಲೇ ಇರಬೇಕು. ನಿರಂತರ ಓದುವಿಕೆಯನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕನಿಗೆ ನಿವೃತ್ತಿ ಎಂಬುದೇ ಇಲ್ಲ. ತನ್ನ ಶಿಷ್ಯರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂಬ ಮಹತ್ತರ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಈ ವೃತ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಾವು ಶಿಕ್ಷೆ ಕೊಟ್ಟು ಕಲಿಸಿದ ಪಾಠ ಇಂದು ಅವರ ಜೀವನಕ್ಕೆ ಭದ್ರಬುನಾದಿಯಾಗಿದೆ. ಶಿಕ್ಷಕ ಶಿಕ್ಷೆ ಕೊಡುವುದು ದುರುದ್ದೇಶದಿಂದ ಅಲ್ಲ. ಅವನ ಬದುಕು ಸಾಕಾರಗೊಳ್ಳಲಿ ಎಂಬ ಉದ್ದೇಶದಿಂದ. ಗುರುವಿನ ಸ್ಥಾನಮಾನ ಅರಿತು ತಮಗೆ ಪಾಠ ಕಲಿಸಿದ ಶಿಕ್ಷರನ್ನು ಗೌರವಿಸುವ ಈ ದಿನ ತಮ್ಮೆಲ್ಲರಿಗೂ ಸಂದ ಮಹತ್ವದ ದಿನ ಎಂದು ಆನಂದ್ ವಾಡೇಕರ್ ಭಾವುಕರಾಗಿ ಹೇಳಿದರು. ನಿವೃತ್ತ ಪ್ರಾಂಶುಪಾಲೆ ಸುಧಾಮಣಿ ಮಾತನಾಡಿ ಋಣ ತೀರಿಸಲಾಗದ್ದು ಯಾವುದಾದರೂ ಇದ್ದರೆ ಅದು ಗುರುವಿನ ಋಣ. ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ಬಾಳಿದರೆ ಶಿಷ್ಯ ತನ್ನ ಗುರುವಿಗೆ ಕೊಡುವ ಗುರುದಕ್ಷಿಣೆ ಎಂದರು. ಈ ವೇಳೆ ತಮಗೆ ವಿದ್ಯೆ ಕಲಿಸಿದ ಶಾರದಾ ಆನಂದ್ ವಾಡೇಕರ್, ಸೀತಮ್ಮ, ರಾಮಯ್ಯ, ಸಿ.ಕುಸುಮ, ರಂಗಪ್ಪ, ಕೋಮಲ ರವರನ್ನು ಮತ್ತು ತಮ್ಮೊಂದಿಗೆ ವಿದ್ಯಾಭ್ಯಾಸ ಮಾಡಿದ ಸೈನಿಕ ದಿವಂಗತ ಬಸವೇಗೌಡರ ಪತ್ನಿ ಸವಿತಾರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಎಲ್ಲಾ ಶಿಕ್ಷಕರೊಂದಿಗೆ ಗ್ರಾಮ ದೇವತೆ ಹೊನ್ನಾದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದಾರಿಯುದ್ದಕ್ಕೂ ಹೂವಿನ ಮಳೆ ಸುರಿಸುತ್ತಾ, ತಮ್ಮ ಶಿಕ್ಷಕರಿಗೆ ಜಯಘೋಷ ಹಾಕುತ್ತಾ ವೇದಿಕೆಗೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಗುಡಿಗೌಡರಾದ ಸಿದ್ದಗೌಡ, ಗ್ರಾಮದ ಮುಖಂಡರಾದ ಡಿ.ಎನ್.ಶಂಕರೇಗೌಡ, ಡಿ.ಟಿ.ವೆಂಕಟೇಶ್, ಜಿ.ಬಿ.ಗೌಡ, ಡಿ.ಕೆ.ವೆಂಕಟೇಶ್, ಡಿ.ಕೆ.ತಿಮ್ಮೇಗೌಡ, ಡಿ.ಬಿ.ಶಿವರಾಜು, ಡಿ.ಕೆ.ನಾಗರಾಜು, ಡಿ.ವಿ.ರಾಜಕುಮಾರ್, ಸಿದ್ದಗಂಗಯ್ಯ, ಮುಖ್ಯೋಪಧ್ಯಾಯರಾದ ಸುರೇಶ್, ನಂ.ರಾಜು ಉಪಸ್ಥಿತರಿದ್ದರು. ಎಲ್ಲಾ ಹಿರಿಯ ವಿದ್ಯಾರ್ಥಿಗಳು ಬಿಳಿ ಪಂಚೆ, ಬಿಳಿ ಷರ್ಟ್, ಬಿಳಿ ಶಾಲು ಧರಿಸಿದ್ದರೆ, ವಿದ್ಯಾರ್ಥಿನಿಯರು ರೇಷ್ಮೆ ಸೀರೆ, ಕುಪ್ಪಸ ತೊಟ್ಟು ಬಹಳ ಸಂಭ್ರಮಿಸಿದರು. ಹಲವಾರು ಮಂದಿ ತಮ್ಮ ಮಕ್ಕಳು, ಹೆಂಡತಿ, ಪತಿಯರೊಂದಿಗೆ ಆಗಮಿಸಿದ್ದರು. ಕೆಲವರು ಮೊಮ್ಮೊಕ್ಕಳನ್ನೂ ಸಹ ಗುರುವಂದನಾ ಕಾರ್ಯಕ್ರಮಕ್ಕೆ ಕರೆತಂದಿದುದು ಕಂಡುಬಂತು. ದಂಡಿನಶಿವರ ಕುಮಾರ್ ಸ್ವಾಗತಿಸಿದರು. ಪವಿತ್ರ ನಿರೂಪಿಸಿದರು. ಪ್ರತಿಮಾ ವಂದಿಸಿದರು.