ಕನ್ನಡಪ್ರಭ ವಾರ್ತೆ ಉಳ್ಳಾಲ
ಫಾ. ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾ. ಮುಲ್ಲರ್ ಹೋಮಿಯೋಪಥಿ, ವೈದ್ಯಕೀಯ ಮಹಾವಿದ್ಯಾಲಯ ಸ್ನಾತಕೋತ್ತರ ಕೋರ್ಸ್ 25 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದು, ರಜತೋತ್ಸವ ಸಮಾರಂಭದ ಪ್ರಯುಕ್ತ 7 ಸ್ನಾತಕೋತ್ತರ ವಿಭಾಗಗಳಿಂದ ವರ್ಷವಿಡೀ ವಿವಿಧ ಸೆಮಿನಾರ್, ಕಲಿಕಾ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ನಡೆಸಲಾಗಿದೆ. ‘ರಜತೋತ್ಸವ’ ರಾಷ್ಟ್ರೀಯ ಹೋಮಿಯೋಪಥಿ ಸ್ನಾತಕೋತ್ತರ ಸಮ್ಮೇಳನ ಮೇ 18ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಫಾ. ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಹೇಳಿದರು.ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭ ಮೇ 18ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ನವದೆಹಲಿಯ ಭಾರತ ಸರ್ಕಾರ ಹೋಮಿಯೋಪಥಿ ರಾಷ್ಟ್ರೀಯ ಆಯೋಗ ಕಾರ್ಯದರ್ಶಿ ಡಾ. ಸಂಜಯ್ ಗುಪ್ತಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಸ್ನಾತಕೋತ್ತರ ಕಾರ್ಯಕ್ರಮದ 25 ವರ್ಷಗಳನ್ನು ಸಂಕಲಿಸುವ ಸಮ್ಮೇಳನದ ಸ್ಮರಣಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಡಾ. ಜಸ್ವಂತ್ ಪಾಟೀಲ್ ಸಮ್ಮೇಳನದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ‘ಸಾಕ್ಷ್ಯಾಧಾರಿತ ಹೋಮಿಯೋಪಥಿ ವಿಧಾನಗಳ ಮೂಲಕ ಕಷ್ಟಕರ ಪ್ರಕರಣಗಳನ್ನು ಪರಿಹರಿಸುವುದು’ ಕುರಿತು ವಿವರಿಸಲಿದ್ದಾರೆ. ರಾಷ್ಟ್ರೀಯ ಸ್ನಾತಕೋತ್ತರ ಸಮ್ಮೇಳನವು ದೇಶದ ವಿವಿಧ ಭಾಗಗಳಿಂದ 250 ಪ್ರತಿನಿಧಿಗಳನ್ನು ನಿರೀಕ್ಷಿಸುತ್ತಿದೆ ಎಂದು ಹೇಳಿದರು.ಭಾರತದಾದ್ಯಂತ ಹೋಮಿಯೋಪಥಿ ಸ್ನಾತಕೋತ್ತರ ವಿದ್ವಾಂಸರು ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಹಳೆಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಪೇಪರ್ ಮತ್ತು ಪೋಸ್ಟರ್ ಪ್ರಸ್ತುತಿ ಹಾಗೂ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.
‘ಮುಲ್ಲರ್ ಕಾಂಪ್ಲೆಕ್ಸ್'''' ಶಂಕುಸ್ಥಾಪನೆ: ರಜತ ಮಹೋತ್ಸವ ಪ್ರಯುಕ್ತ ‘ಮುಲ್ಲರ್ ಕಾಂಪ್ಲೆಕ್ಸ್’ಗೆ ಶಂಕು ಸ್ಥಾಪನೆ ಮಾಡುವುದರ ಮೂಲಕ ಫಾ. ಮುಲ್ಲರ್ ಸಂಸ್ಥೆಯ ಇತಿಹಾಸಕ್ಕೆ ಮತ್ತೊಂದು ಪ್ರಗತಿಯನ್ನು ಸೇರ್ಪಡಿಸಲಾಗುವುದು.ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶ್ರವಣ ಶಾಸ್ತ್ರ ವಾಕ್ ಚಿಕಿತ್ಸೆ (ಆಡಿಯೋಲಜಿ ಮತ್ತು ಸ್ಪೀಚ್ ಥೆರಪಿ) ಹೊರರೋಗಿ ವಿಭಾಗವನ್ನು ಉದ್ಘಾಟಿಸಲಾಗುವುದು. ಆಡಳಿತಧಿಕಾರಿ ವಂ. ರೋಶನ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ ವಂ. ಆಶ್ವಿನ್ ಕ್ರಾಸ್ತಾ, ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್, ಉಪ ಪ್ರಾಂಶುಪಾಲ ಡಾ. ವಿಲ್ಮಾ ಮೀರಾ ಡಿಸೋಜ, ರಜತೋತ್ಸವ ಸಮ್ಮೇಳನ ಸಂಯೋಜಕಿ ಡಾ. ಜೋಶ್ನಾ ಶಿವಪ್ರಸಾದ್, ಸಂಘಟನಾ ಕಾರ್ಯದರ್ಶಿ ಡಾ. ಶ್ರೇಯಾಂಕ್ ಕೋಟ್ಯಾನ್, ಮಾಧ್ಯಮ ಸಮಿತಿ ಸಂಯೋಜಕಿ ಡಾ. ಅನುಷಾ ಜಿ.ಎಸ್. ಸುದ್ದಿಗೋಷ್ಠಿಯಸಲ್ಲಿ ಇದ್ದರು.