ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಫ್‌ಡಿಎ ಕೃಷ್ಣರಾವ್ ಎಂಬಾತ ಸಾಗುವಳಿ ಜಮೀನಿಗೆ ಖಾತೆ ಹಾಗೂ ಕಂದಾಯ ದಾಖಲೆ ಮಾಡಿಕೊಡಲು ಲಕ್ಷಾಂತರ ಹಣ ಪಡೆದು ರೈತರಿಗೆ ವಂಚನೆ ಮಾಡಿದ್ದಾರೆ ಎಂದು ಓಂಕಾರ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪಿ.ಮುನಿಯಪ್ಪ ತಿಳಿಸಿದರು.ನಗರದ ತಾಲೂಕು ಕಚೇರಿ ಆವರಣದಲ್ಲಿ ಎಫ್‌ಡಿಎ ಕೃಷ್ಣರಾವ್ ವಿರುದ್ಧ ವಂಚನೆಗೊಳಗಾದ ರೈತರ ಜೊತೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸೂಲಿಬೆಲೆ ಗ್ರಾಮದ ಸರ್ವೆ ನಂ.10, ಬತ್ತಿಗಾನಹಳ್ಳಿ ಗ್ರಾಮದ ಸರ್ವೆ ನಂ.63ರಲ್ಲಿ ಬಡವರಿಗೆ ಜಮೀನು ಮಂಜೂರಾಗಿದ್ದು ೨೦೦೩ರಲ್ಲಿ ಟಿಟಿ ಕಂದಾಯಗಳನ್ನು ಕಟ್ಟಿ ಸಾಗುವಳಿ ಚೀಟಿ ಸಹ ಪಡೆದಿದ್ದಾರೆ. ಜೊತೆಗೆ ರೈತರು ಅನುಭವದಲ್ಲಿಯೂ ಇದ್ದಾರೆ. ಈ ಸಾಗುವಳಿ ಜಮೀನಿಗೆ ಸರ್ಕಾರದ ಆದೇಶದಂತೆ ಪಹಣಿ, ಕಂದಾಯ, ಖಾತೆಯ ದಾಖಲೆಗಳನ್ನು ಪಡೆದುಕೊಳ್ಳಲು ಸಾಕಷ್ಟು ಬಾರಿ ತಾಲೂಕು ಕಚೇರಿಗೆ ಅರ್ಜಿ ಹಾಕಲಾಗಿದೆ. ಅದರಂತೆ ಡಿಸೆಂಬರ್ 24, 2024ರಂದು ಸುಮಾರು 9ಕ್ಕೂ ಹೆಚ್ಚಿನ ರೈತರು ತಹಸೀಲ್ದಾರ್ ಕಚೇರಿಗೆ ದೃಢೀಕೃತ ನಕಲುಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 6, 2025ರಂದು ತಹಸೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎನ್.ಕೃಷ್ಣರಾವ್ ಸಾಗುವಳಿ ಚೀಟಿ ವಿತರಣಾ ವಹಿಯನ್ನು ಮಾತ್ರ ಕೊಟ್ಟಿದ್ದು ಮಂಜೂರಾತಿಯ ಉಳಿದ ದೃಢೀಕೃತ ನಕಲುಗಳನ್ನು ಕೇಳಿದಾಗ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಖಾತೆ ಪಹಣಿ ಕಂದಾಯ ಪ್ರತಿಗಳಿಗೆ ಲಕ್ಷಾಂತರ ರು. ಹಣ ಪಡೆದು ವಂಚಿಸಿದ್ದು ಆತನ ವಿರುದ್ಧ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷೆ ಮಹಾಲಕ್ಷ್ಮಿ ಮಾತನಾಡಿ, ಕೃಷ್ಣರಾವ್ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸಾರ್ವಜನಿಕ ಸೇವೆ ಮಾಡುವುದು ಬಿಟ್ಟು ಲಂಚ ಪಡೆದೂ ಕೆಲಸ ಮಾಡಿಕೊಡದೆ ರೈತರ ಮೇಲೆಯೇ ದೌರ್ಜನ್ಯವೆಸಗಿದ್ದಾರೆ. ಅನ್ಯಾಯಕ್ಕೊಳಗಾದ ರೈತರಿಗೆ ಕೂಡಲೇ ಅಗತ್ಯ ದಾಖಲೆಗಳಾದ ಮೂಲ ಮಂಜೂರಾತಿ ನಡಾವಳಿ ಪ್ರತಿ, ಸಾಗುವಳಿ ಚೀಟಿ ನಕಲು ಪ್ರತಿ, ಗ್ರಾಮಸ್ಥರಿಗೆ ಮಂಜೂರಾದ ವಿಸ್ತೀರ್ಣದಂತೆ ಖಾತೆ ಮಾಡಿಕೊಡಬೇಕು. ರೈತರಿಂದ ಪಡೆದಿರುವ ಲಂಚವನ್ನ ವಾಪಸ್ ಕೊಡಬೇಕು. ಜೊತೆಗೆ ಕೃಷ್ಣರಾವ್ ವಿರುದ್ಧ ತನಿಖೆಗೆ ಆದೇಶ ಮಾಡಬೇಕೆಂದು ಒತ್ತಾಯಿಸಿದರು.ಜೈ ಮಹಾ ನಾಯಕ ಕಟ್ಟಡ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ್, ಓಂಕಾರ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೇಶವ, ಖಜಾಂಚಿ ಎನ್ ಆನಂದ, ಬಹುಜನ ಭೀಮರಾವ್ ರಾಜ್ಯಾಧ್ಯಕ್ಷ ಶ್ರೀಕಾಂತ್, ಭಾರತೀಯ ಪ್ರಜಾ ಸಂಘ ಭೀಮನಡೆ ರಾಜ್ಯಾಧ್ಯಕ್ಷ ಜಯಪ್ರಕಾಶ್, ಮಹಿಳಾ ರಾಜ್ಯಾಧ್ಯಕ್ಷೆ ಗೀತಾ, ಬೆಂಗಳೂರು ಮಹಿಳಾ ಅಧ್ಯಕ್ಷೆ ಲಕ್ಷ್ಮೀದೇವಿ, ಸಮಾಜ ಸೇವಕಿ ಲಕ್ಷ್ಮಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಹಾಜರಿದ್ದರು.
ಅಳಲು ತೋಡಿಕೊಂಡ ರೈತರು:ಎಫ್‌ಡಿಎ ಕೃಷ್ಣರಾವ್ ರೈತರಿಂದ 18 ಲಕ್ಷ ರು. ಹಣ ಪಡೆದು ಸಾಗುವಳಿ ಜಮೀನಿನ ದಾಖಲೆ ನೀಡದೆ ಸ್ವಾಧೀನದಲ್ಲಿರುವ ರೈತರಿಗೆ ಅಗತ್ಯ ದಾಖಲೆ ಮಾಡಿಕೊಡದೆ, ಸ್ವಾಧೀನ ಅನುಭವದಲ್ಲೇ ಇಲ್ಲದ ಹಾಗೂ ಸಾಗುವಳಿಗೆ ಅರ್ಜಿಯೇ ಹಾಕದ ರೈತರಿಗೆ ಲಕ್ಷಾಂತರ ಹಣ ಪಡೆದು ಅವರ ಹೆಸರಿಗೆ ಮಾಡಿಕೊಡಲು ಮುಂದಾಗಿದ್ದಾನೆ. ಹಣ ಕೊಟ್ಟಿರುವ ನಾವು ದಾಖಲಾತಿ ಕೇಳಿದರೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗುತ್ತಾನೆ ಎಂದು ನೊಂದ ರೈತ ನರಸಿಂಹಯ್ಯ ತಮ್ಮ ಅಳಲು ತೊಡಿಕೊಂಡರು.