ಶ್ರೀಶೈಲ ಮಠದ
ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 7 ನಿರ್ದೇಶಕ ಸ್ಥಾನಗಳಿಗೆ ಅ.19ರಂದು ಮತದಾನ ನಡೆಯಲಿದೆ. ಈ ಚುನಾವಣೆಗೆ ಅಡ್ಡ ಮತದಾನದ ಭೀತಿ ಶುರುವಾಗಿದೆ. ಮಾಜಿ ಸಂಸದ ರಮೇಶ ಕತ್ತಿ- ಶಾಸಕ ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಸಹೋದರರ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ.
ಬಿಡಿಸಿಸಿ ಬ್ಯಾಂಕಿನ ಆಡಳಿತದ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಸಹೋದರರ ಬಣಕ್ಕೆ ಮ್ಯಾಜಿಕ್ ನಂಬರ್ ತಲುಪಲು ಇನ್ನೂ ಎರಡು ಸ್ಥಾನಗಳಲ್ಲಿ ಗೆಲ್ಲಲೇಬೇಕಿದೆ. ಬ್ಯಾಂಕಿನ 16 ನಿರ್ದೇಶಕ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಈ ಪೈಕಿ ಜಾರಕಿಹೊಳಿ ಬಣದಲ್ಲಿ ಏಳು ನಿರ್ದೇಶಕರಿದ್ದಾರೆ. ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಮತ್ತು ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ ಇವರಿಬ್ಬರೂ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೇ ತಟಸ್ಥವಾಗಿ ಉಳಿದುಕೊಂಡಿದ್ದಾರೆ. ಇವರಿಬ್ಬರೂ ಕತ್ತಿ- ಸವದಿ ಬಣಕ್ಕೆ ಬೆಂಬಲ ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.ಇದೀಗ 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಇನ್ನು 3 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಬಣ ರಣತಂತ್ರ ರೂಪಿಸಿದೆ. ಇನ್ನು ಜಾರಕಿಹೊಳಿ ಬಣದ ಅಭ್ಯರ್ಥಿಗಳನ್ನು ಸೋಲಿಸಲು ಕತ್ತಿ- ಸವದಿ ಬಣ ಶತಾಯ ಗತಾಯ ಪ್ರಯತ್ನವನ್ನೂ ನಡೆಸಿದ್ದು, ತಂತ್ರ ಪ್ರತಿತಂತ್ರವನ್ನು ಕೂಡ ನಡೆಯುತ್ತಿವೆ. ಆದರೆ, ಈ ಎರಡೂ ಬಣಗಳಿಗೆ ಅಡ್ಡ ಮತದಾನದ ಆತಂಕ ಎದುರಾಗಿದ್ದು, ಯಾರಿಗೆ ಯಾರು ಮತ ಹಾಕುತ್ತಾರೆ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ.
ಹುಕ್ಕೇರಿ, ನಿಪ್ಪಾಣಿ, ಅಥಣಿ, ಕಿತ್ತೂರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಡ್ಡ ಮತದಾನ ನಡೆಯುವ ಆತಂಕವನ್ನು ಘಟಾನುಘಟಿ ನಾಯಕರೇ ಬಹಿರಂಗವಾಗಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆ ಜಾರಕಿಹೊಳಿ ಸಹೋದರರು, ಕತ್ತಿ-ಸವದಿ ಬಣಕ್ಕೆ ಪ್ರತಿಷ್ಠೆಯಾಗಿದೆ. ಹೇಗಾದರೂ ಮಾಡಿ ಬಿಡಿಸಿಸಿ ಬ್ಯಾಂಕಿನ ಮೇಲೆ ಪ್ರಬಲ ಹಿಡಿತ ಸಾಧಿಸಲು ಜಾರಕಿಹೊಳಿ ಮೂವರು ಸಹೋದರರು ಚುನಾವಣಾ ಆಖಾಡಕ್ಕಿಳಿದಿದ್ದಾರೆ. ಈ ನಿಟ್ಟಿನಲ್ಲಿ ರಣತಂತ್ರವನ್ನೂ ರೂಪಿಸಿದ್ದಾರೆ.
ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರು