ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಗೆಲುವಿನ ಮೋಹ, ಸೋಲಿನ ಭಯ ಬಿಟ್ಟರೇ ಯಾರು ಬೇಕಾದರೂ ಸಾಧನೆ ಮಾಡಬಹುದಾಗಿದ್ದು, ಇದಕ್ಕೆ ನಾನೇ ಸಾಕ್ಷಿ ಎಂದು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಜಶೇಖರ ರಗಟಿ ಹೇಳಿದರು.ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ನೇತೃತ್ವದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಕಲ್ಮಠದ ಶ್ರೀಗಳಿಂದ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಎಂದಿಗೂ ಪ್ರಶಸ್ತಿಗಳಿಗಾಗಿ ಕೆಲಸ ಮಾಡದೇ ಕೇವಲ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿಯೇ ಕ್ರಿಯಾಶೀಲನಾಗಿರುವುದರಿಂದ ಪ್ರಸ್ತುತ ಗೌರವವನ್ನು ನನ್ನ ವಿದ್ಯಾರ್ಥಿಗಳಿಗೆ ಅರ್ಪಿಸುವುದಾಗಿ ತಿಳಿಸಿದರು.ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕಲಿಸುವಿಕೆ ಮತ್ತು ಕಲಿಯುವಿಕೆಗಳನ್ನು ಮೈಗೂಡಿಸಿಕೊಂಡ ಕೆಲವೇ ಕೆಲವು ಸೃಜನಶೀಲ ಶಿಕ್ಷಕರಲ್ಲಿ ರಾಜಶೇಖರ ರಗಟಿ ಒಬ್ಬರು. ಪ್ರಥಮ ಬಾರಿಗೆ ಕಿತ್ತೂರಿಗೆ ತಮ್ಮ ಕ್ರಿಯಾಶೀಲ ಬೋಧನೆಯ ಮೂಲಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಂದ ಗೌರವ ರಗಟಿ ಅವರಿಗೆ ಸಲ್ಲುತ್ತದೆ ಎಂದು ಆಶೀರ್ವದಿಸಿದರು.ಪತ್ರಕರ್ತ ಪ್ರದೀಪ ಮೇಲಿನಮನಿ ಮಾತನಾಡಿ, ಗ್ರಾಮೀಣ ಪ್ರದೇಶದ ಪರಿಸರದಲ್ಲಿ ಬೆಳೆದ ರಾಜಶೇಖರ ರಗಟಿಯವರು ಉತ್ತಮ ಬೋಧನೆಯಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿ ಈ ಪ್ರಶಸ್ತಿಗೆ ಭಾಜನರಾಗಿರುವದು ಸಂತಸ ತಂದಿದೆ ಎಂದು ಅಭಿನಂದಿಸಿದರು.ಬೆಳಗಾವಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಗಜಾನಂದ ಸೊಗಲನ್ನವರ ಮಾತನಾಡಿ, ಸರಳ ಸಜ್ಜನಿಕೆಯ ರಾಜಶೇಖರ ರಗಟಿಯವರಿಗೆ ಯೋಗ್ಯತೆ ಮತ್ತು ಯೋಗ ಕೂಡಿ ಬಂದಿದ್ದು, ಈ ಪ್ರಶಸ್ತಿಗೆ ಅರ್ಹರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಶುಭ ಕೋರಿದರು.
ಕಿತ್ತೂರಿನ ಎಸ್.ಬಿ.ಎಂ.ಸರ್ಕಾರಿ ಬಾಲಿಕೆಯರ ಪ್ರೌಢಶಾಲೆಯ ಉಪಪ್ರಾಂಶುಪಾಲ ಮಹೇಶ ಚನ್ನಂಗಿಯವರು ತಮ್ಮ ಸಮಾರೋಪ ನುಡಿಗಳಲ್ಲಿ ರಾಜಶೇಖರ ರಗಟಿಯವರು ಶಿಕ್ಷಕ ವೃತ್ತಿ ಆರಂಭಿಸುವುದಕ್ಕಿಂತ ಮೊದಲು ಪಟ್ಟ ಪರಿಶ್ರಮ ಮತ್ತು ಶಿಕ್ಷಕ ವೃತ್ತಿಯ ಮೇಲೆ ಅವರಿಗಿರುವ ಶ್ರದ್ಧೆಗಳೇ ಈ ಪ್ರಶಸ್ತಿ ದೊರೆಯಲು ಕಾರಣ ಎಂದು ಅಭಿನಂದಿಸಿದರು.
ಸರ್ಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯ ಮುಖ್ಯೋಪಾಧ್ಯಪಕ ಬಿ.ಸಿ.ಬಿದರಿ ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮ ಶಾಲೆಯ ಶಿಕ್ಷಕರಾದ ರಾಜಶೇಖರ ಅವರು ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಡಿಎಸ್‌ಇಆರ್‌ಟಿ ವತಿಯಿಂದ ಸಂಪನ್ಮೂಲ ವ್ಯಕ್ತಿಯಾಗಿ, ಚುನಾವಣೆಯಲ್ಲಿ ಮಾಸ್ಟರ್ ಟ್ರೇನರ್ ಆಗಿ ಕಾರ್ಯ ನಿರ್ವಹಿಸಿಸಿದ್ದಾರೆ. ತಮ್ಮ ಶಾಲೆಯಲ್ಲಿ ಜಿಲ್ಲೆಯಲ್ಲಿಯೇ ಪ್ರ್ರಥಮವಾಗಿ ಸಮಾಜ ವಿಜ್ಞಾನ ಪ್ರಯೋಗಾಲಯ ನಿರ್ಮಿಸಿದ್ದಲ್ಲದೇ ಯೂಟೂಬ್ ಚಾನಲ್ ಮೂಲಕ ರಾಜ್ಯದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿರುವರ ಜೊತೆಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವುದು ಕಿತ್ತೂರ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು.ನಾಗಯ್ಯ ಹುಲೆಪ್ಪನವರಮಠ ಪ್ರಾರ್ಥಿಸಿದರು. ಭುವನಾ ಹಿರೇಮಠ ಸ್ವಾಗತಿಸಿದರು. ಮಂಜುನಾಥ ಕಳಸಣ್ಣವರ ವಂದಿಸಿದರು. ಮಹೇಶ್ವರ ಹೊಂಗಲ ನಿರೂಪಿಸಿದರು. ಚನ್ನಮ್ಮನ ಕಿತ್ತೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ರಾಘವೇಂದ್ರ, ಮೆಹಬೂಬ್ ಮುಲ್ತಾನಿ, ಬಸವರಾಜ ಆಸಂಗಿಮಠ, ಸಿದ್ರಾಮ ತಳವಾರ ಉಪಸ್ಥಿತರಿದ್ದರು.ನಾನು ಎಂದಿಗೂ ಪ್ರಶಸ್ತಿಗಳಿಗಾಗಿ ಕೆಲಸ ಮಾಡದೇ ಕೇವಲ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿಯೇ ಕ್ರಿಯಾಶೀಲನಾಗಿರುವುದರಿಂದ ಪ್ರಸ್ತುತ ಗೌರವವನ್ನು ನನ್ನ ವಿದ್ಯಾರ್ಥಿಗಳಿಗೆ ಅರ್ಪಿಸುವೆ.
-ರಾಜಶೇಖರ ರಗಟಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ.