ಆಸ್ತಿ ಸಂರಕ್ಷಣೆಗಾಗಿ ಅಭಿಯಾನ ನಡೆಸಿದರೂ 13,000 ಸರ್ಕಾರಿ ಶಾಲೆಗೆ ‘ಜಾಗ’ ಕೈತಪ್ಪುವ ಭೀತಿ

KannadaprabhaNewsNetwork |  
Published : Jun 27, 2025, 12:48 AM ISTUpdated : Jun 27, 2025, 10:06 AM IST
ವಿದ್ಯಾರ್ಥಿನಿಯರು | Kannada Prabha

ಸಾರಾಂಶ

ಸರ್ಕಾರ ಕಳೆದ ಐದು ವರ್ಷಗಳಿಂದ ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗಾಗಿ ಅಭಿಯಾನ ನಡೆಸಿದರೂ ಸುಮಾರು 13 ಸಾವಿರಕ್ಕೂ ಹೆಚ್ಚು ಶಾಲೆ, ಕಾಲೇಜುಗಳ ಜಾಗ ಇಂದಿಗೂ ಅವುಗಳ ಹೆಸರಲ್ಲಿಲ್ಲ. ಇದರಿಂದ ಅವುಗಳ ಆಸ್ತಿ ಕೈತಪ್ಪುವ ಭೀತಿ ಮುಂದುವರೆದಿದೆ.

ಲಿಂಗರಾಜು ಕೋರಾ

 ಬೆಂಗಳೂರು :  ಸರ್ಕಾರ ಕಳೆದ ಐದು ವರ್ಷಗಳಿಂದ ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗಾಗಿ ಅಭಿಯಾನ ನಡೆಸಿದರೂ ಸುಮಾರು 13 ಸಾವಿರಕ್ಕೂ ಹೆಚ್ಚು ಶಾಲೆ, ಕಾಲೇಜುಗಳ ಜಾಗ ಇಂದಿಗೂ ಅವುಗಳ ಹೆಸರಲ್ಲಿಲ್ಲ. ಇದರಿಂದ ಅವುಗಳ ಆಸ್ತಿ ಕೈತಪ್ಪುವ ಭೀತಿ ಮುಂದುವರೆದಿದೆ.

ರಾಜ್ಯದಲ್ಲಿ 33 ಸಾವಿರಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳು, 15 ಸಾವಿರಕ್ಕೂ ಹೆಚ್ಚು ಪ್ರೌಢ ಶಾಲೆಗಳು ಹಾಗೂ 1200ಕ್ಕೂ ಹೆಚ್ಚು ಪಿಯು ಕಾಲೇಜುಗಳಿವೆ. ಈ ಪೈಕಿ ಸುಮಾರು 11 ಸಾವಿರ ಪ್ರಾಥಮಿಕ ಶಾಲೆಗಳು, 2000 ಸಾವಿರಕ್ಕೂ ಹೆಚ್ಚು ಪ್ರೌಢ ಶಾಲೆಗಳು ಮತ್ತು 156 ಪಿಯು ಕಾಲೇಜುಗಳ ಆಸ್ತಿಗಳು ಆಯಾ ಶಾಲೆ, ಕಾಲೇಜುಗಳ ಹೆಸರಲ್ಲಿ ನೋಂದಣಿಯಾಗಿಲ್ಲ. ಈ ಬಗ್ಗೆ ಜಿಲ್ಲಾವಾರು ಮಾಹಿತಿ ‘ಕನ್ನಡಪ್ರಭ’ಗೆ ಲಭ್ಯವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲೇ ಅತಿ ಹೆಚ್ಚು 1200ಕ್ಕೂ ಹೆಚ್ಚು ಶಾಲೆ, ಕಾಲೇಜುಗಳಿಗೆ ಅವುಗಳ ಆಸ್ತಿ ನೋಂದಣಿಯಾಗುವುದು ಬಾಕಿ ಉಳಿದಿದೆ.

ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಈ ಪೈಕಿ ಒಂದಷ್ಟು ಪ್ರಕರಣಗಳಲ್ಲಿ ಹಿಂದೆ ಶಾಲೆಗಳಿಗೆ ದಾನ ನೀಡಿದವರು ನಕಲಿ ದಾಖಲೆ ಸೃಷ್ಟಿಸಿ ತಾವು ದಾನ ನೀಡಿಲ್ಲ, ಇದು ತಮ್ಮದೇ ಜಾಗ ಎಂದು ವಾದಿಸುತ್ತಿದ್ದಾರೆ. ಇನ್ನು ಕೆಲ ಪ್ರಕರಣಗಳಲ್ಲಿ ದಾನ ನೀಡಿದ ಸಮಯದಲ್ಲಿ ಆ ಜಾಗವನ್ನು ಶಾಲೆ ಹೆಸರಿಗೆ ನೋಂದಣಿ ಆಗದೆ ನಿರ್ಲಕ್ಷ್ಯ ತೋರಿರುವ ಪರಿಣಾಮ ಈಗಲೂ ಆ ಜಾಗ ಮೂಲ ವಾರಸುದಾರರ ಹೆಸರಲ್ಲೇ ಇದೆ.

ಭೂಮಿ ಬೆಲೆಯೇರಿದಂತೆ ಆ ಕುಟುಂಬದ ವಾರಸುದಾರರು ತಮ್ಮ ಪೂರ್ವಜರು ದಾನ ಮಾಡಿರುವ ಬಗ್ಗೆ ಯಾವುದೇ ಮಾಹಿತಿ, ದಾಖಲೆಗಳಿಲ್ಲ. ಇದಕ್ಕೆ ನಮ್ಮ ಸಮ್ಮತಿಯೂ ಇಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಕೆಲ ಶಾಲೆಗಳ ಜಾಗ ಭೂಗಳ್ಳರಿಂದ ಒತ್ತುವರಿಯಾಗಿರುವುದೂ ಇದೆ ಎಂದು ತಿಳಿದು ಬಂದಿದೆ.

ಐದು ವರ್ಷಗಳಿಂದ ಆಂದೋಲನ:

ಸರ್ಕಾರಿ ಶಾಲೆ, ಕಾಲೇಜುಗಳ ಸಂರಕ್ಷಣೆಗಾಗಿ ಸರ್ಕಾರದ ಕಳೆದ ಐದು ವರ್ಷಗಳಿಂದ ಅಭಿಯಾನ ಅಥವಾ ಆಂದೋಲನ ನಡೆಸುತ್ತಿದೆ. ಆಂದೋಲನ ಆರಂಭವಾದ ಮೊದಲ ವರ್ಷ 48 ಸಾವಿರ ಶಾಲೆಗಳ ಪೈಕಿ ಕೇವಲ 29 ಸಾವಿರ ಶಾಲೆಗಳ ಆಸ್ತಿ ಮಾತ್ರ ಸಮರ್ಪಕವಾಗಿದ್ದವು. ಉಳಿದ 19 ಸಾವಿರ ಶಾಲೆಗಳ ಆಸ್ತಿ ಶಾಲೆಗಳ ಹೆಸರಲ್ಲಿ ಇರಲಿಲ್ಲ. 5 ವರ್ಷಗಳಲ್ಲಿ ಕೇವಲ ನಾಲ್ಕೈದು ಸಾವಿರ ಶಾಲೆಗಳ ಆಸ್ತಿಗಳನ್ನು ಮಾತ್ರ ರಕ್ಷಿಸುವ ಕಾರ್ಯ ಆಗಿದೆ. ಇನ್ನೂ 13 ಸಾವಿರ ಶಾಲೆಗಳ ಆಸ್ತಿ ನೋಂದಣಿ ಬಾಕಿ ಇದೆ.

ಪ್ರತೀ ವರ್ಷ ಮೂರು ತಿಂಗಳು ಸರ್ಕಾರಿ ಶಾಲಾ ಆಸ್ತಿ ಸಂರಕ್ಷಣಾ ಆಂದೋಲನ ನಡೆಸಲಾಗುತ್ತದೆ. ಈ ವೇಳೆ, ಇಲಾಖೆಯ ಆಯಾ ಜಿಲ್ಲಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವ್ಯಾವ ಶಾಲೆಗಳ ಆಸ್ತಿ ಅವುಗಳ ಹೆಸರಲ್ಲಿ ಇಲ್ಲ. ದಾನ ನೀಡಿದವರು ನಕಲಿ ದಾಖಲೆ ಸೃಷ್ಟಿಸಿದ್ದರೆ, ಯಾರಾದರೂ ಒತ್ತುವರಿ ಮಾಡಿದ್ದರೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಕಾನೂನಾತ್ಮಕವಾಗಿ ಮೂಲ ದಾಖಲೆಗಳನ್ನು ಪಡೆದು ಪರಿಶೀಲಿಸಿ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕು. ಶಾಲೆ ಹೆಸರಿಗೆ ಆಸ್ತಿ ನೋಂದಣಿಗೆ ಕ್ರಮ ವಹಿಸಬೇಕೆಂದು ಸರ್ಕಾರ ಸೂಚಿಸುತ್ತಾ ಬರುತ್ತಿದೆ. ಈ ವರ್ಷವೂ ಮೇ 23ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಅವರು ಇಲಾಖೆ ಆಯುಕ್ತರು, ಅಪರ ಆಯುಕ್ತರಿಗೆ ಪತ್ರ ಬರೆದು ಶಾಲೆಗಳ ಆಸ್ತಿ ರಕ್ಷಣೆಗೆ ಕ್ರಮ ವಹಿಸಲು ಸೂಚಿಸಿದ್ದರು. ಬಾಕ್ಸ್‌....

ಹೆಚ್ಚು ಶಾಲೆಗಳ ಆಸ್ತಿ  ನೋಂದಣಿ ಬಾಕಿ ಎಲ್ಲೆಲ್ಲಿ?

ಶಿಕ್ಷಣ ಸಚಿವ ತವರು ಜಿಲ್ಲೆ ಶಿವಮೊಗ್ಗದಲ್ಲಿ 1200ಕ್ಕೂ ಹೆಚ್ಚು ಶಾಲೆಗಳು, 14 ಪಿಯು ಕಾಲೇಜುಗಳ ಆಸ್ತಿ ನೋಂದಣಿ ಬಾಕಿ ಇದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 850, ಮಂಡ್ಯ ಜಿಲ್ಲೆಯಲ್ಲಿ 900, ಬೆಂಗಳೂರು ನಗರದಲ್ಲಿ 600, ತುಮಕೂರು ಜಿಲ್ಲೆಯಲ್ಲಿ 1000, ರಾಮನಗರ 772, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 800, ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಚಿಕ್ಕಮಗಳೂರು, ಕಾರವಾರ, ಶಿರಸಿ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ತಲಾ 600ರಿಂದ 700, ಉಳಿದ ಜಿಲ್ಲೆಗಳಲ್ಲಿ ಕನಿಷ್ಟ 100ರಿಂದ ಗರಿಷ್ಟ 400 ಶಾಲೆ, ಕಾಲೇಜುಗಳ ಆಸ್ತಿ ನೋಂದಣಿಯಾಗಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ