ಹರಿಹರ ನಗರದಲ್ಲಿ ಸಾರ್ವಜನಿಕರ ದೂರುಗಳಿಗೆ ಸದಸ್ಯರ ಸ್ಪಂದನೆ: ವಾಗ್ವಾದ
ಕನ್ನಡಪ್ರಭ ವಾರ್ತೆ ಹರಿಹರ ನಗರದ ನಗರಸಭೆ ಆವರಣದಲ್ಲಿ ಖಾತಾ ಉತಾರ, ಬಿ ಖಾತಾ ಸೇರಿದಂತೆ ವಿವಿಧ ಕಾರ್ಯಗಳಿಗೆ ಆಗಮಿಸಿದ ಸಾರ್ವಜನಿಕರ ಕೆಲಸಗಳಿಗೆ ಸಿಬ್ಬಂದಿ ತಾತ್ಸಾರ, ನಿಧಾನಗತಿ ಹಾಗೂ ಸರಿಯಾದ ಮಾಹಿತಿ ನೀಡದೇ ಅಲೆದಾಡಿಸುತ್ತಿದ್ದಾರೆ. ಈ ಧೋರಣೆ ವಿರುದ್ಧ ಜನತೆ ಗುರುವಾರ ಮಧ್ಯಾಹ್ನ ನಗರಸಭೆ ಸದಸ್ಯರ ಬಳಿ ಸಮಸ್ಯೆ ಹೇಳಿ, ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಸದಸ್ಯರು, ದಿಢೀರನೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರಿಗೆ ಮುತ್ತಿಗೆ ಹಾಕಿ, ಅವ್ಯವಸ್ಥೆ ವಿರುದ್ಧ ತರಾಟೆ ತೆಗೆದುಕೊಂಡು, ವಾಗ್ವಾದಕ್ಕೂ ಇಳಿದ ಘಟನೆಯೂ ನಡೆಯಿತು.ಸಾರ್ವಜನಿಕರಿಗೆ ಅಗತ್ಯ ನೀರು, ನೈರ್ಮಲ್ಯ, ಆರೋಗ್ಯ ಹಾಗೂ ಮನೆ, ಖಾಲಿ ನಿವೇಶನಗಳ ಭೂ ದಾಖಲೆಗಳ ದಾಖಲೆ, ನೋಂದಣಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಪದೇಪದೇ ನಗರಸಭೆ ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎಂದು ನೊಂದವರು ಆಕ್ರೋಶಗೊಂಡು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಅನಂತರ ಸ್ಥಳದಲ್ಲಿದ್ದ ನಗರಸಭಾ ಸದಸ್ಯರ ವಿರುದ್ಧವೂ ಮುಗಿಬಿದ್ದ ಕಾರಣ ಗೊಂದಲದ ವಾತಾವರಣ ಉಂಟಾಯಿತು.
ಸಭಾಂಗಣಕ್ಕೆ ತೆರಳುತಿದ್ದಂತೆ ಸಾರ್ವಜನಿಕರು ಅಧ್ಯಕ್ಷರ ಎದುರು ಅಹವಾಲುಗಳನ್ನು ತಿಳಿಸಿ, ಸಮಸ್ಯೆಗಳನ್ನು, ಸಿಬ್ಬಂದಿ ಕಾರ್ಯವೈಖರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಅನೇಕರು ತಾವು ಯಾವಾಗಿನಿಂದ ಇಲ್ಲಿಗೆ ಬರುತ್ತಿದ್ದೇನೆ, ಎಷ್ಟು ಚಪ್ಪಲಿ ಸವೆಸಿದ್ದೀನಿ, ಎಷ್ಟು ಸಲ ಸರಿಯಾದ ಮಾಹಿತಿ ನೀಡದೇ ಕಳಿಸಿದ್ದಾರೆ ಎಂಬುದನ್ನು ವಿವರಿಸಿದರು. ಅನೇಕ ಬಾರಿ ಬಂದಾಗಲೂ ನಗರಸಭೆ ಸಿಬ್ಬಂದಿ ಕಚೇರಿಯಲ್ಲಿಯೇ ಸಿಗುವುದಿಲ್ಲ ಎಂದು ಕಿಡಿಕಾರಿದರು.
ಸದಸ್ಯ ಆಟೋ ಹನುಮಂತಪ್ಪ ಮಾತನಾಡಿ, ಬಹುತೇಕ ಸಿಬ್ಬಂದಿಗೆ ದಾಖಲೆಗಳ ಬರೆಯೋದಕ್ಕೇ ಬರುವುದಿಲ್ಲ. ಅಂಥವರು ಮತ್ತೊಬ್ಬರ ಸಹಾಯ ಪಡೆದು ಫೈಲ್‌ಗಳಿಗೆ ಷರಾ ಬರೆಸುತ್ತಾರೆ. ಈ ಕಾರಣದಿಂದಲೂ ನಗರಸಭೆಯಲ್ಲಿ ಕೆಲಸಗಳು ಆಗುತ್ತಿಲ್ಲ. ಇದರಿಂದಾಗಿ ಜನರಿಗೆ ತೊಂದರೆ ಆಗುತ್ತಿದೆ. ಜೊತೆಗೆ ಜನತೆ ಕೊಟ್ಟ ಫೈಲ್‍ಗಳನ್ನು ಕಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಇನ್ನು ಮುಂದಾದರೂ ಎಚ್ಚತ್ತು ಸಾರ್ವಜನಿಕರ ಸೇವೆ ಪ್ರಾಮಾಣಿಕವಾಗಿ, ಶೀಘ್ರವಾಗಿ ಮಾಡಿಕೊಡಿ ಎಂದು ತಿಳಿಹೇಳಿದರು.
- - -
- ಶಂಕರ್ ಕಟಾವ್ಕರ್, ಹಿರಿಯ ಸದಸ್ಯ
-26ಎಚ್‍ಆರ್‍ಆರ್05ಎ.ಜೆಪಿಜಿ:
ಹರಿಹರ ನಗರಸಭೆಯಲ್ಲಿ ಸೇವೆ ವಿಳಂಬ ವಿರುದ್ಧ ಸಾರ್ವಜನಿಕರು, ಸದಸ್ಯರು ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು.