ಕನ್ನಡಪ್ರಭ ವಾರ್ತೆ ಹಾಸನ
ಹೇಮಾವತಿ, ಯಗಚಿ ಮತ್ತು ವಾಟೆಹೊಳೆ ಜಲಾಶಯ ಯೋಜನೆಯಡಿ ನಾಲೆಗಳ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹಾಲಿ ಪರಿಹಾರ ಪಡೆದ ಕೆಲವರು ನ್ಯಾಯಾಲಯದಲ್ಲಿ ಹೆಚ್ಚಿನ ಪರಿಹಾರಕ್ಕಾಗಿ ದಾವೆ ಹೂಡಿ ಲಕ್ಷಗಟ್ಟಲೆ ಪರಿಹಾರ ಪಡೆದಿದ್ದಾರೆ. ಇದರಿಂದ ಸರ್ಕಾರಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ನಷ್ಟ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ. ರೇವಣ್ಣ ಎಚ್ಚರಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, 1986ರಲ್ಲಿ ಈ ಯೋಜನೆಗಳ ಅಡಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ, ಪ್ರತಿ ಎಕರೆಗೆ ೩ ರಿಂದ ೫ ಸಾವಿರ ರುಪಾಯಿ ಪರಿಹಾರ ನಿಗದಿಯಾಗಿತ್ತು. ಆ ಸಮಯದಲ್ಲಿ ಈ ಪರಿಹಾರ ಮೊತ್ತವನ್ನು ಒಪ್ಪದ ಭೂಮಾಲೀಕರು ತಕ್ಷಣ ಕೋರ್ಟ್ ಮೊರೆ ಹೋದರು. ನಂತರ ೨೦೦೪- ೦೫ರಲ್ಲಿ ಹಲವು ಪ್ರಕರಣಗಳು ಇತ್ಯರ್ಥವಾಗಿ ಪರಿಹಾರ ಮೊತ್ತವನ್ನು ಎಕರೆಗೆ ೨೯,೫೦೦ರಿಂದ ೩೦,೦೦೦ ರುಪಾಯಿಗೆ ಏರಿಸಲಾಗಿತ್ತು. ಆದರೆ ಈಗ, ೨೦ ವರ್ಷಗಳ ಹಿಂದೆಯೇ ಇತ್ಯರ್ಥಗೊಂಡಿದ್ದ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವುದನ್ನು ಅವರು ಗಂಭೀರವಾಗಿ ಪರಿಗಣಿಸಿದರು. ಹೈಕೋರ್ಟ್ ಇತ್ತೀಚೆಗೆ ಕೇವಲ ೫ ವರ್ಷಗಳ ವಿಳಂಬವನ್ನೂ ಸಹಿಸದೆ ಅರ್ಜಿಯನ್ನು ವಜಾ ಮಾಡಿದೆ. ಆದರೆ ಜಿಲ್ಲಾ ನ್ಯಾಯಾಲಯವು ೧೮- ೨೦ ವರ್ಷಗಳ ವಿಳಂಬವನ್ನೂ ಮನ್ನಾ ಮಾಡಿ, ಎಕರೆಗೆ ೧೨ ಲಕ್ಷ ರುಪಾಯಿ ಪರಿಹಾರ ನಿಗದಿ ಮಾಡಿದೆ. ಶಾಸನಬದ್ಧ ಸವಲತ್ತುಗಳನ್ನು ಸೇರಿಸಿದರೆ ಪರಿಹಾರ ಮೊತ್ತವು ಎಕರೆಗೆ ಕನಿಷ್ಠ ೮೦ ಲಕ್ಷದಿಂದ ೧ ಕೋಟಿ ರುಪಾಯಿಗೆ ಏರಲಿದೆ. ಈ ಹೊಣೆಗಾರಿಕೆಯನ್ನು ಕಾವೇರಿ ನೀರಾವರಿ ನಿಗಮವೇ ಹೊರುವ ಪರಿಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ರೀತಿಯ ಇನ್ನೂ ೬೦೦ ರಿಂದ ೮೦೦ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿಯಿದ್ದು, ಎಲ್ಲದಕ್ಕೂ ಇದೇ ರೀತಿಯ ತೀರ್ಪು ಬರಲು ಸಾಧ್ಯತೆಯಿದೆ. ಹಾಗಾದರೆ ನಿಗಮವು ಮತ್ತು ರಾಜ್ಯ ಸರ್ಕಾರವು ಸಾವಿರಾರು ಕೋಟಿ ರುಪಾಯಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಈ ವಿಷಯವನ್ನು ಗಮನಕ್ಕೆ ತಂದುಕೊಂಡು ಹಿಂದಿನ ಹಾಸನ ಜಿಲ್ಲಾ ಆಡಳಿತಾಧಿಕಾರಿ (ಡೀಸಿ) ಸತ್ಯಭಾಮ ಸಿ ಅವರು ವಕೀಲ ಎಸ್.ಎಚ್. ಮೋಹನ್ ಕುಮಾರ್ ಅವರ ದೂರು ಆಧರಿಸಿ ಮುಖ್ಯಮಂತ್ರಿ, ಅವರ ಕಾರ್ಯದರ್ಶಿ ಬಿ.ಬಿ. ಕಾವೇರಿ, ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಖ್, ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಅಶೋಕ್, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಗೌರವ್ ಗುಪ್ತಾ ಮತ್ತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಆಧಾರದಲ್ಲಿ ರಾಜ್ಯ ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಭೂಸ್ವಾಧೀನ ಅಧಿಕಾರಿಗಳೂ ಶಾಮೀಲು:ಇಷ್ಟೊಂದು ದೊಡ್ಡ ಆರ್ಥಿಕ ಅಪಾಯ ಎದುರಿಸುತ್ತಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚರಿಕೆ ವಹಿಸಿಲ್ಲ. ಸಾವಿರಾರು ಕೋಟಿ ರುಪಾಯಿ ಅಕ್ರಮದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಸರ್ಕಾರಿ ವಕೀಲರು ಸಹ ಪರಿಣಾಮಕಾರಿ ರೀತಿಯಲ್ಲಿ ಸರ್ಕಾರದ ಪರವಾಗಿ ಹೋರಾಡಲು ವಿಫಲರಾಗಿದ್ದಾರೆ. ಇದನ್ನು ತಡೆಯಲು ಉನ್ನತ ಮಟ್ಟದ ತನಿಖೆ ನಡೆಯಬೇಕು. ಯಾರ್‍ಯಾರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಬಯಲಾಗುತ್ತದೆ ಎಂದು ಕಿಡಿಕಾರಿದರು.
ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ನಿಷ್ಠಾವಂತರು. ಅವರು ಕೂಡಲೇ ಈ ಬಗ್ಗೆ ಗಮನಹರಿಸಿ, ಸರ್ಕಾರಕ್ಕೆ ಉಂಟಾಗುವ ನಷ್ಟವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಇತರರು ಇದ್ದರು.