ಆನೆ, ಹಂದಿ ಕಾಟಕ್ಕೆ ಹೆದರಿ ಇವ್ರು ಬೆಳೆಯೋದು ಶುಂಠಿ ಮಾತ್ರ- ಕಳೆದ ವರ್ಷ ಬಂಪರ್‌ ಬೆಲೆ...!

KannadaprabhaNewsNetwork | Published : Apr 17, 2025 12:00 AM

ಸಾರಾಂಶ

ನಾವು ಬಾಳೆ, ಕಬ್ಬು, ಭತ್ತ ಬೆಳೆಯಲು ಆಗುವುದಿಲ್ಲ. ಏಕೆಂದರೆ ನಮ್ಮ ಗ್ರಾಮವು ಒಂದು ಕಡೆ ನಾಗರಹೊಳೆ ಮತ್ತೊಂದು ಕಡೆ ಬಂಡೀಪುರ ಕಾಡಿಗೆ ಹೊಂದಿಕೊಂಡಂತೆ ಇದೆ. ಇದರಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚು. ಅದರಲ್ಲೂ ಬಾಳೆ, ಕಬ್ಬು, ಭತ್ತ ಬೆಳೆದರೆ ಆನೆಗಳು, ಹಂದಿಗಳು ನಾಶ ಮಾಡಿಬಿಡುತ್ತವೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಆನೆ, ಹಂದಿಗಳ ಕಾಟಕ್ಕೆ ಹೆದರಿ ಇವರು ಬೆಳೆಯೋದು ಶುಂಠಿ ಮಾತ್ರ, ಕಳೆದ ವರ್ಷ ಬಂಪರ್‌ ಬೆಲೆ ಸಿಕ್ಕಿತ್ತು. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ದರ ಕುಸಿದಿದೆ.

- ಇದು ಸರಗೂರು ತಾಲೂಕು ಕಂದಲಿಕೆ ಹೋಬಳಿ ಹುಲ್ಲೇಮಾಳದ ರೈತ ರವಿ ಅವರ ಕಥೆ. ಕಾಡಂಚಿನಲ್ಲಿ ಬರುವ ದಡದಹಳ್ಳಿ ಗೇಟ್‌ ಬಳಿ ಅವರು 14 ಎಕರೆ ಜಮೀನಿನಲ್ಲಿ ಶುಂಠಿ ಬೆಳೆಯುತ್ತಾರೆ. ಇದರಲ್ಲಿ ಸ್ವಂತ 7-8 ಎಕರೆ. ಉಳಿಕೆ ಗುತ್ತಿಗೆ ಜಮೀನು.

ನಾವು ಬಾಳೆ, ಕಬ್ಬು, ಭತ್ತ ಬೆಳೆಯಲು ಆಗುವುದಿಲ್ಲ. ಏಕೆಂದರೆ ನಮ್ಮ ಗ್ರಾಮವು ಒಂದು ಕಡೆ ನಾಗರಹೊಳೆ ಮತ್ತೊಂದು ಕಡೆ ಬಂಡೀಪುರ ಕಾಡಿಗೆ ಹೊಂದಿಕೊಂಡಂತೆ ಇದೆ. ಇದರಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚು. ಅದರಲ್ಲೂ ಬಾಳೆ, ಕಬ್ಬು, ಭತ್ತ ಬೆಳೆದರೆ ಆನೆಗಳು, ಹಂದಿಗಳು ನಾಶ ಮಾಡಿಬಿಡುತ್ತವೆ. ಈ ಭಯಕ್ಕೆ ನಾವು ಸಾಂಪ್ರದಾಯಿಕವಾದ ಯಾವುದೇ ಬೆಳೆಯನ್ನು ಬೆಳೆಯುವುದಿಲ್ಲ. ಶುಂಠಿ ಬೆಳೆದರೆ ಸೇಫ್‌. ಇದನ್ನು ಕಾಡುಪ್ರಾಣಿಗಳು ತಿನ್ನುವುದಿಲ್ಲ. ಹೀಗಾಗಿ ಇಡೀ ಜಮೀನಿನಲ್ಲಿ ಶುಂಠಿ ಬಿಟ್ಟು ಬೇರೇನೂ ಬೆಳೆದಿಲ್ಲ ಎನ್ನುತ್ತಾರೆ ರವಿ.

ಕಾಡು ಪ್ರಾಣಿಗಳ ಹಾವಳಿಯಿಂದಾಗಿ ನಾವು ಮನೆ ಅಳತೆಗೂ ಯಾವುದೇ ಬೆಳೆ ಬೆಳೆಯುವುದಿಲ್ಲ. ಊಟಕ್ಕೆ ಅಕ್ಕಿಯನ್ನು ಸಹ ಖರೀದಿಸುತ್ತೇವೆ ಎಂದರು.

ಕಳೆದ ಬಾರಿ ಶುಂಠಿಯ 60 ಕೆಜಿಯ ಚೀಲಕ್ಕೆ 5,700 ರು. ಇತ್ತು. ಇದರಿಂದ ನಮಗೆ 40-50 ಲಕ್ಷ ರು. ಹಣ ಸಿಕ್ಕಿತ್ತು. ಈ ಬಾರಿ 1,300 ರು.ಗೆ ಕುಸಿದಿದೆ. ಇದರಿಂದ 10 ಲಕ್ಷ ರು. ಸಿಕ್ಕರೆ ಹೆಚ್ಚು. ಇದರಲ್ಲಿ ಅರ್ಧದಷ್ಟು ಶುಂಠಿ ಬೆಳೆಯಲು ಹಣ ವೆಚ್ಚವಾಗಿರುತ್ತದೆ.

ಸಂಪರ್ಕ ವಿಳಾಸಃ

ರವಿ ಬಿನ್‌ ಶಂಭಪ್ಪ,

ಹುಲ್ಲೇಮಾಳ

ಕಂದಲಿಕೆ ಹೋಬಳಿ

ಸರಗೂರು ತಾಲೂಕು

ಮೈಸೂರು ಜಿಲ್ಲೆ

ಮೊ. 96327 48670
ನಾವು ಶುಂಠಿ ಮಾತ್ರ ಬೆಳೆಯುತ್ತಿರುವುದರಿಂದ ಕೃಷಿ ಸಂಬಂಧಿತ ಇಲಾಖೆಗಳಾದ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಸಂಪರ್ಕಕ್ಕೆ ಹೋಗಿಲ್ಲ. ಶುಂಠಿ ಕೀಳಲು 60 ಕೆಜಿಯ ಒಂದು ಚೀಲಕ್ಕೆ 150 ರು. ಕೂಲಿ ಕೊಡಬೇಕು. ಒಂದು ಎಕರೆ ಬಿತ್ತನೆಗೆ 17-18 ಸಾವಿರ ರು. ಕೊಡಬೇಕು. ಹೀಗಾಗಿ ಶುಂಠಿ ಬೆಳೆಯಲು ಸಾಕಷ್ಟು ಖರ್ಚು ಇದೆ. ದಲ್ಲಾಳರೇ ಬಂದು ಜಮೀನಿನ ಬಳಿ ಖರೀದಿಸುವುದರಿಂದ ಅನುಕೂಲ ಇದೆ. ಆದರೆ ಈ ಬಾರಿ ರೇಟು ಬಿದ್ದಿರುವುದರಿಂದ ಕಷ್ಟವಾಗಿದೆ.

- ರವಿ. ಹುಲ್ಲೇಮಾಳ

Share this article