ಜಾತಿ ಜನಗಣತಿ ಮತ್ತೊಮ್ಮೆ ಮಾಡಿ: ರಂಭಾಪುರಿ ಶ್ರೀ

KannadaprabhaNewsNetwork |  
Published : Apr 17, 2025, 12:00 AM IST
ಚಿತ್ರ16ಜಿಟಿಎಲ್2ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ ವೀರ ಸೋಮೇಶ್ವರ ಜಗದ್ಗುರುಗಳು | Kannada Prabha

ಸಾರಾಂಶ

ಕೆಲವು ಸಮುದಾಯಗಳನ್ನು ತುಷ್ಟೀಕರಿಸುವ ಕೆಲಸವಾಗಬಾರದು. ಸಂವಿಧಾನದಲ್ಲಿ ಯಾವ ಜಾತಿಗಳಿಗೆ ಎಷ್ಟು ಪ್ರಾತಿನಿಧ್ಯ ಕೊಡಬೇಕು ಎಂಬುದನ್ನು ಪರಾಮರ್ಶಿಸಿ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು. ಆತುರದ ನಿರ್ಧಾರ ಕೈಗೊಂಡರೆ ಸರ್ಕಾರಕ್ಕೆ ತೊಂದರೆ ಆಗಬಹುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಹೇಳಿದ್ದಾರೆ.

ಗುತ್ತಲ: ಜಾತಿ ಗಣತಿಯನ್ನು ಇನ್ನೊಮ್ಮೆ ಮಾಡಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಜ್ಯ ಸರ್ಕಾರ ಇತ್ತೀಚೆಗೆ ಜಾತಿ ಜನಗಣತಿಯ ವರದಿಯನ್ನು ವಿಧಾನಮಂಡಲದಲ್ಲಿ ಅಂಗೀಕಾರ ಮಾಡಿ ಚರ್ಚೆಗೆ ಇಟ್ಟಿದೆ. ಈ ವಿಷಯದಲ್ಲಿ ಪರ ಮತ್ತು ವಿರೋಧ ಎಲ್ಲೆಡೆ ಕೇಳಿ ಬರುತ್ತಿದೆ. ವೀರಶೈವ -ಲಿಂಗಾಯತ ಸಮಾಜ ಬಹು ದೊಡ್ಡದಿದ್ದು, ಒಳಜಾತಿಗಳನ್ನು ವಿಂಗಡಿಸುವ ಮೂಲಕ ಒಟ್ಟು ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇದೇ ರೀತಿ ಒಕ್ಕಲಿಗ ಸಮುದಾಯದವರಿಗೂ ಅನ್ಯಾಯವಾಗಿದೆ. ಒಕ್ಕಲಿಗರೂ ಈ ವರದಿಯನ್ನು ವಿರೋಧಿಸಿದ್ದಾರೆ. ನಾಳೆ ಸಚಿವ ಸಂಪುಟದ ವಿಶೇಷ ಸಭೆ ಕರೆದಿರುವುದು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಗಮನಹರಿಸಬೇಕಲ್ಲದೆ, ಕೆಲವು ಸಮುದಾಯಗಳನ್ನು ತುಷ್ಟೀಕರಿಸುವ ಕೆಲಸವಾಗಬಾರದು. ಸಂವಿಧಾನದಲ್ಲಿ ಯಾವ ಜಾತಿಗಳಿಗೆ ಎಷ್ಟು ಪ್ರಾತಿನಿಧ್ಯ ಕೊಡಬೇಕು ಎಂಬುದನ್ನು ಪರಾಮರ್ಶಿಸಿ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು. ಆತುರದ ನಿರ್ಧಾರ ಕೈಗೊಂಡರೆ ಸರ್ಕಾರಕ್ಕೆ ತೊಂದರೆ ಆಗಬಹುದು. ಆಡಳಿತ ಪಕ್ಷದ ಒಕ್ಕಲಿಗ ಶಾಸಕರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ, ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ವಿರೋಧ ಪಕ್ಷವೂ ಜಾತಿ ಜನಗಣತಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಇವುಗಳನ್ನು ಮುಖ್ಯಮಂತ್ರಿ ಲೆಕ್ಕಿಸದೆ ಜಾತಿ ಜನಗಣತಿ ವರದಿ ಅಂಗೀಕರಿಸಿದರೆ ಮತ್ತಷ್ಟು ಜಾತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ನಾಳೆ ನಡೆಯುವ ಸಂಪುಟದ ಸಭೆ ಏನು ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದನ್ನು ಆಧರಿಸಿ ಮುಂದಿನ ನಿರ್ಧಾರಗಳನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಾಗೂ ಒಕ್ಕಲಿಗರ ಸಂಘ ತೆಗೆದುಕೊಳ್ಳಲಿದೆ. ಆದ್ದರಿಂದ ರಾಜ್ಯ ಸರ್ಕಾರ ಎಲ್ಲ ವರ್ಗಗಳ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ