ಹುಬ್ಬಳ್ಳಿ:
ದೆಹಲಿಯ ಜಂತರ್ ಮಂತರ್‌ನಲ್ಲಿ ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ, ದುರ್ಗದ ಬೈಲ್ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದ ನೂರಾರು ಹೋರಾಟಗಾರರು, ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹಿರಿಯ ಸಾಹಿತಿ ಬಸವರಾಜ ಸೂಳಿಭಾವಿ ಮಾತನಾಡಿ, ಅಕ್ರಮ ಬಾಂಗ್ಲಾದೇಶಿ ಹಾಗೂ ಪಾಕಿಸ್ತಾನಿ ವಲಸಿಗರನ್ನು ಗುರುತಿಸುವ ಉದ್ದೇಶದಿಂದ ಎಸ್‌ಐಆರ್ ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ, ಪರಿಷ್ಕರಣೆ ಬಳಿಕ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪತ್ತೆಯಾದ ಅಕ್ರಮ ವಲಸಿಗರ ಅಂಕಿ-ಅಂಶಗಳನ್ನು ಬಹಿರಂಗಪಡಿಸಬೇಕು. ವಿದೇಶಿಯರನ್ನು ಗುರುತಿಸುವ ಹೆಸರಿನಲ್ಲಿ ಸಾಮಾನ್ಯ ಜನರು, ಬಡವರು, ಕಾರ್ಮಿಕರು ಹಾಗೂ ದಲಿತರನ್ನು ಗುರಿಯಾಗಿಸಲಾಗಿದೆ ಎಂದು ದೂರಿದರು.ಹೋರಾಟಗಾರ ಮಹೇಶ ಪತ್ತಾರ ಮಾತನಾಡಿ, ಸಂವಿಧಾನವು ಶ್ರೀಮಂತರಿಗೂ ವಸತಿರಹಿತ ಬಡವರಿಗೂ ಸಮಾನ ಮತದಾನದ ಹಕ್ಕು ನೀಡಿದೆ. ಅಂತಹ ಹಕ್ಕನ್ನು ರಾಜಕೀಯ ಹಿತಾಸಕ್ತಿಗಾಗಿ ಕಸಿಯಲು ಅವಕಾಶ ನೀಡಬಾರದು. ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡಿದೆ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.