ಶಿರಸಿ: ಪ್ರಸ್ತುತ ಬೇಡ್ತಿ-ವರದಾ ನದಿ ಜೋಡಣೆ ಭಾರೀ ಸದ್ದು ಮಾಡುತ್ತಿದೆ. ಆದರೆ ತೆರೆಮರೆಯಲ್ಲೇ ಇನ್ನೊಂದು ಇಂತಹದ್ದೇ ಯೋಜನೆ ಈ ಬಗ್ಗೆ ವರದಿ ಸಿದ್ಧವಾಗಿದೆ ಎನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ. ಅದುವೇ ಅಘನಾಶಿನಿ ನದಿ ತಿರುವು ಯೋಜನೆ.
ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತರು ರಾಜ್ಯ ಜಲ ಸಂಪನ್ಮೂಲ ಇಲಾಖೆಯಲ್ಲಿನ ಅಘನಾಶಿನಿ ತಿರುವು ಯೋಜನೆಯ ಮಹತ್ವದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದು ಬಹಿರಂಗಗೊಳಿಸಿದ್ದಾರೆ. ಬೇಡ್ತಿ ಅಘನಾಶಿನಿ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರಿಗೂ ಅಘನಾಶಿನಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.ಹಿನ್ನೆಲೆ: ಬೇಡ್ತಿ-ಅಘನಾಶಿನಿ ಬೃಹತ್ ಜಲವಿದ್ಯುತ್ ಯೋಜನೆಗಳ ಸಂದರ್ಭದಲ್ಲಿ 1980-90ರ ದಶಕದಲ್ಲಿ ಸಿದ್ದಾಪುರ ತಾಲೂಕಿನ ಹೆಗ್ಗರಣಿ-ಗೋಳಿಮಕ್ಕಿ ಬಳಿ ಬಾಳೆಕೊಪ್ಪದಲ್ಲಿ ಅಘನಾಶಿನಿ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿತ್ತು. ವ್ಯಾಪಕ ಜನಾಂದೋಲನ ನಂತರ ಕೆಪಿಸಿ ಬೇಡ್ತಿ-ಅಘನಾಶಿನಿ ಜಲವಿದ್ಯುತ್ ಯೋಜನೆಗಳನ್ನು ಕೈಬಿಟ್ಟಿತ್ತು. 2017ರ ಹೊತ್ತಿಗೆ ಅಘನಾಶಿನಿ ವರದಾ ನದಿ ತಿರುವು ಯೋಜನೆ ಪ್ರಸ್ತಾಪವಾಗಿತ್ತು. ಶಿರಸಿಯಲ್ಲಿ ನಡೆದ ಪಶ್ಚಿಮ ಘಟ್ಟ ಉಳಿಸಿ ಸಮ್ಮೇಳನದಲ್ಲಿ ಪೇಜಾವರ ಶ್ರೀಗಳ ಸಮ್ಮುಖದಲ್ಲಿ ಸ್ವರ್ಣವಲ್ಲೀ ಶ್ರೀಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
2021-22ರಲ್ಲಿ ಬೇಡ್ತಿ ವರದಾ ಯೋಜನೆ ಜತೆ ಅಘನಾಶಿನಿ ವರದಾ ಯೋಜನೆಗೂ ತಡೆಬಿದ್ದಿತ್ತು.ಈಗ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ.
ಯೋಜನೆ ವಿವರ: ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ಜೋಡಿಸುವ ರಾಜ್ಯ ಸರ್ಕಾರದ ಯೋಜನೆ ಇದು. ಅಘನಾಶಿನಿ ನದಿಗೆ ಸಿದ್ದಾಪುರ ತಾಲೂಕಿನ ಬಾಳೆಕೊಪ್ಪ ಬಳಿ ಆಣೆಕಟ್ಟೆ ನಿರ್ಮಿಸಿ ನೀರನ್ನು ವೇದಾವತಿ ನದಿಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಸಾಗಿಸುವ ಉದ್ದೇಶ ಹೊಂದಿದೆ. ಬೃಹತ್ ಯೋಜನೆ ಇದಾಗಿದೆ. 35 ಟಿಎಂಸಿ ನೀರನ್ನು ಅಘನಾಶಿನಿಯಿಂದ ಎತ್ತಿ ಸಾಗಿಸುವ ಬೃಹತ್ ಯೋಜನೆ ಇದಾಗಿದೆ. ರಾಜ್ಯ ಸರ್ಕಾರದ ಮನವಿ ಮೇರೆಗೆ ಪ್ರಿ-ಫಿಸಿಬಿಲಿಟಿ ವರದಿಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ತಯಾರಿಸಿದೆ.ಅಂದಾಜು ₹23000 ಕೋಟಿ ವೆಚ್ಚವಾಗಲಿದೆ. 194 ಕಿಮೀ ಉದ್ದ ಪೈಪ್‌ಲೈನ್ ಹಾಕಲಾಗುತ್ತದೆ ಎನ್ನುತ್ತದೆ ಪ್ರಿ-ಫಿಸಿಬಿಲಿಟಿ ವರದಿ.
ದುಷ್ಪರಿಣಾಮಗಳ ಬಗ್ಗೆ ತಜ್ಞರ ಅಭಿಪ್ರಾಯ: ಅಘನಾಶಿನಿ-ವೇದಾವತಿ ಯೋಜನೆಯಿಂದ ಪಶ್ಚಿಮ ಘಟ್ಟದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ವೃಕ್ಷಲಕ್ಷ ಆಂದೋಲನದ ತಜ್ಞರ ವಿಭಾಗ ಅಭಿಪ್ರಾಯಗಳನ್ನು ದಾಖಲಿಸಿದೆ.ಅಂದಾಜು 1,20,000 ಮರಗಳು ಆಹುತಿ ಆಗಲಿವೆ. ಅಂದಾಜು 600 ಎಕರೆ ಅರಣ್ಯ ಯೋಜನೆಗೆ ಬೇಕಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಕಣಿವೆ ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು 2012ರಲ್ಲೇ ಘೋಷಣೆಗೊಂಡಿದೆ. ಶಿರಸಿ ನಗರ, ಕುಮಟಾ ಪಟ್ಟಣ, ಕುಮಟಾ ತಾಲೂಕಿನ ಬಹುಗ್ರಾಮ ಯೋಜನೆ ಹಾಗೂ ಒಂದು ಲಕ್ಷ ರೈತರ ಪಂಪ್‌ಸೆಟ್‌ಗಳಿಗೆ ನೀರು ಒದಗಿಸುವ ಅಘನಾಶಿನಿಗೆ ನದಿ ತಿರುವು ಕಂಟಕ ತರುತ್ತದೆ. ಅಘನಾಶಿನಿ ಕಣಿವೆ ಭೂಕುಸಿತ ಸೂಕ್ಷ್ಮ ಪ್ರದೇಶವಾಗಿದ್ದು, ವ್ಯಾಪಕ ಭೂಕುಸಿತಕ್ಕೆ ಕಾರಣವಾಗಲಿದೆ. ಕರಾವಳಿ ಮೀನುಗಾರ, ರೈತರ ಬದುಕು ಕಸಿದುಕೊಳ್ಳಲಿದೆ ಎಂಬುದು ತಜ್ಞರ ಅಭಿಪ್ರಾಯ ಎಂದು ವೃಕ್ಷ ಲಕ್ಷ ಆಂದೋಲನದ ಪ್ರಮುಖರಾದ ಅನಂತ ಹೆಗಡೆ ಅಶೀಸರ, ಶ್ರೀಪಾದ ಬಿಚ್ಚುಗತ್ತಿ, ಗಣಪತಿ ಕೆ., ವೆಂಕಟೇಶ ಕೆ. ಮತ್ತಿತರರು ತಿಳಿಸಿದ್ದಾರೆ.