ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಹೋರಾಟ: ರಂಗಹನುಮಯ್ಯ
ಕೇಂದ್ರ ಸರ್ಕಾರ ನರೇಗಾ ಯೋಜನೆ, ವಿಕಸಿತ್ ಭಾರತ್ ರೋಜಗಾರ್ ಮತ್ತು ಅಜೀವಕಾ ಮಿಷನ್ ಕಾಯ್ದೆ ೨೦೨೫ ಎಂದು ಬದಲಾಯಿಸಿ ಹೊಸ ಕಾಯ್ದೆಗಳನ್ನ ಜಾರಿಗೆ ತಂದಿರುವುದರ ವಿರುದ್ಧ ಫೆ.೧೨ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ರಂಗಹನುಮಯ್ಯ ತಿಳಿಸಿದರು.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಕುರಿತಾಗಿ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಕೇಂದ್ರದಲ್ಲಿ ಮೂರು ಬಾರಿ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ಸರ್ಕಾರ ೨೦೨೫ ನವಂಬರ್‌ನಲ್ಲಿ ೪ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ರದ್ದುಪಡಿಸಬೇಕು. ಇದರ ಜೊತೆಗೆ ನರೇಗಾ ಯೋಜನೆಗೆ ಮತ್ತೆ ಚಾಲನೆ ನೀಡುವುದು, ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು, ಎಪಿಎಂಸಿ ಕಾಯ್ದೆ, ಜಾನುವಾರು ಸಂರಕ್ಷಣಾ ತಿದ್ದಪಡಿ, ವಿದ್ಯುತ್ ಖಾಸಗಿಕರಣ ಕೈ ಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಹಮ್ಮಿಕೊಂಡಿದ್ದು ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಬಾಷ್ ಮಾತನಾಡಿ ಫೆ.೧೨ ರಂದು ಕೊರಟಗೆರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಜಾಥಾ ಹೊರಡಲಾಗುವುದು, ಕೊರಟಗೆರೆ ಪಟ್ಟಣದ ಆಟೋ ಚಾಲಕರು ಅಂಗಡಿ ಮಾಲೀಕರು ಹೋಟಲ್ ಮಾಲೀಕರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಈ ಮುಷ್ಕರದಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.