ಕುಶಾಲನಗರ: ಕಳೆದ 35 ವರ್ಷಗಳಿಂದ ನಿರಂತರ ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡು ಬಡವ, ಶೋಷಿತ ಮತ್ತು ದುರ್ಬಲರ ಸೇವೆಗಾಗಿ ಸಮರ್ಪಿಸಿಕೊಂಡ ಸಜ್ಜನ ರಾಜಕಾರಣಿ ವಿ ಪಿ ಶಶಿಧರ್ ಅವರಿಗೆ 27ರಂದು ಕುಶಾಲನಗರದಲ್ಲಿ ನಾಗರಿಕ ಪೌರ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗ ಅಧ್ಯಕ್ಷ ಅಬ್ದುಲ್ ರಜಾಕ್ ತಿಳಿಸಿದ್ದಾರೆ.ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 27ರಂದು ಸಂಜೆ 4 ಗಂಟೆಗೆ ಕುಶಾಲನಗರದ ತಾವರೆಕೆರೆ ಬಳಿಯ ಎಸ್ ಎಲ್ ಎನ್ ಗ್ರಾಂಡ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದರು. ವಿ.ಪಿ. ಶಶಿಧರ್ಅನ್ಯಾಯ, ಅಕ್ರಮ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಎದೆಗಾರಿಕೆಯಿಂದ ನಿರಂತರವಾಗಿ ಸೆಣಸಾಡುತ್ತಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಗತಿಪರ ಚಿಂತಕರಾಗಿ, ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಆರ್ ಗುಂಡುರಾಯರ ಕನಸಾದ ಕುಶಾಲನಗರ ತಾಲೂಕು ರಚನೆ ಹೋರಾಟಕ್ಕೆ ಹೊಸ ಛಾಪು ಮೂಡಿಸಿ ಸಾಕಾರಗೊಳಿಸಿದವರು ಎಂದರು.
ಸಮಾರಂಭದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೆರವೇರಿಸುವರು. ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿಎ.ಎಸ್. ಪೊನ್ನಣ್ಣ, ಮಾಜಿ ಮಂತ್ರಿಗಳಾದ ಎಚ್. ಸಿ. ಮಹದೇವಪ್ಪ, ತನ್ವೀರ್ ಸೇಟ್, ಮಾಜಿ ಸಂಸದ ಎಚ್. ವಿಶ್ವನಾಥ್, ಕೊಡಗು ವಿವಿ ಉಪಕುಲಪತಿ ಅಶೋಕ್ ಸಂಗಪ್ಪ ಆಲೂರ, ಶಕ್ತಿ ಪತ್ರಿಕೆ ಸಂಪಾದಕ ಜಿ ಚಿದ್ವಿಲಾಸ್, ಹಿರಿಯ ಮುಖಂಡರಾದ ಎಂ ಲಕ್ಷ್ಮಣ್, ಸಾಮಾಜಿಕ ಚಿಂತಕ ವಿವೇಕಾನಂದ, ಬಿಎಂಟಿಸಿ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ ಭಾಗವಹಿಸುತ್ತಾರೆ ಎಂದರು.
ನಂತರ ನಡೆಯುವ ವಿಚಾರ ಸಂಕಿರಣದಲ್ಲಿ ಪ್ರಚಲಿತ ಚುನಾವಣಾ ರಾಜಕಾರಣ ಹಾಗೂ ಪ್ರಜಾಪ್ರಭುತ್ವ ಎಂಬ ವಿಷಯದ ಮೇಲೆ ಹಿರಿಯ ಪತ್ರಕರ್ತ ರಮೇಶ್ ಕುಟ್ಟಪ್ಪ, ಹೋರಾಟಗಾರ ಮುನೀರ್ ಕಾಟಿಪಳ್ಳ ಭಾಗವಹಿಸಲಿದ್ದು ಕಾರ್ಯಕ್ರಮಕ್ಕೆ ಕುಶಾಲನಗರದ ನಿವೃತ್ತ ಶಿಕ್ಷಕ ಎಂ ಎಚ್ ನಜೀರ್ ಅಹ್ಮದ್ ಚಾಲನೆ ನೀಡುತ್ತಾರೆ ಎಂದು ಅಬ್ದುಲ್ ರಜಾಕ್ ಮಾಹಿತಿ ನೀಡಿದರು. ಕಾರ್ಯಕ್ರಮದ ಆಹ್ವಾನ ಪತ್ರ ಬಿಡುಗಡೆ ಮಾಡಲಾಯಿತು.ಗೋಷ್ಠಿಯಲ್ಲಿ ಬಳಗದ ಪ್ರಮುಖರಾದ ವಿ. ಎಸ್. ಆನಂದಕುಮಾರ್, ಕೆ. ಎಸ್. ಕೃಷ್ಣೇಗೌಡ, ವಿ.ಜೆ. ನವೀನ್ ಕುಮಾರ್, ಜಾನ್ ರಾಜ್, ನವೀದ್ ಖಾನ್, ಮೂರ್ತಿ ಎಚ್ ಸಿ, ಚಂದನ್ ಕುಮಾರ್, ರಫೀಕ್ ಖಾನ್, ಗಯಾಜ್ ಇದ್ದರು.