ಕನ್ನಡಪ್ರಭ ವಾರ್ತೆ ಮೈಸೂರು
ಕಬ್ಬು ಬೆಳೆಗಾರ ರೈತರ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರ ಟನ್ ಕಬ್ಬಿಗೆ 3550 ರೂ. ನಿಗದಿ ಮಾಡಿದೆ. 2025- 26ನೇ ಸಾಲಿಗೆ ಕಬ್ಬಿನ ಎಫ್‌ಆರ್ ಪಿ ದರಕ್ಕೆ ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆ ಎಸ್ ಎಪಿ ದರ ಏರಿಕೆ ಮಾಡಿ ಟನ್ ಗೆ 4500 ರೂ. ಕೊಡಿಸಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿಸಿಕೊಡಿಸಬೇಕು. ಎಫ್ಆರ್ ಪಿ ದರ ಪುನರ್ ಪರಿಶೀಲನೆ ಮಾಡಿ ಸಿಎಸಿಪಿ ವರದಿಯಂತೆ ಪ್ರತಿ ಟನ್ ಕಬ್ಬಿಗೆ 4500 ರೂ. ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
2023- 24ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಟನ್ ಗೆ 150 ರೂ. ನಿಗದಿಪಡಿಸಿದ್ದು, ಕಾರ್ಖಾನೆಗಳು ಇನ್ನೂ ನೀಡಿಲ್ಲ. ಅದಕ್ಕೆ ಬಡ್ಡಿ ಸೇರಿಸಿ ತಕ್ಷಣವೇ ಬಾಕಿ ಹಣ ಕೊಡಿಸಬೇಕು. ಕಬ್ಬಿನ ಎಫ್‌ಆರ್ ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಇಳುವರಿ ಮೋಸ ತಪ್ಪಿಸಲು ಇಳುವರಿ ಮಿತಿ ಕನಿಷ್ಟ ಶೇ.9ಕ್ಕೆ ನಿಗದಿ ಆಗಬೇಕು ಎಂದು ಅವರು ಆಗ್ರಹಿಸಿದರು.ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆಗಳ ಮುಂದೆ ಸರ್ಕಾರದಿಂದ ತೂಕದ ಯಂತ್ರ ಸ್ಥಾಪಿಸಬೇಕು. ಜಿಲ್ಲೆಯಲ್ಲಿ ಭತ್ತದ ಬೆಳೆ ಹೆಚ್ಚು ನಾಟಿ ಮಾಡಿದ್ದು, ಯೂರಿಯಾ ರಸಗೊಬ್ಬರದ ಅವಶ್ಯಕತೆ ಹೆಚ್ಚಿದೆ. ಹೀಗಾಗಿ, ರೈತರಿಗೆ ಸಮಸ್ಯೆಯಾಗದಂತೆ ಮುಕ್ತವಾಗಿ ಸಿಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮೈಸೂರು ತಾಲೂಕಿನ ಕಡಕೊಳ ಗ್ರಾಮದಿಂದ ವಾಜಮಂಗಲಕ್ಕೆ ಹೈಟೆನ್ಷನ್ ವೈರ್ ಹಾದು ಹೋಗುತ್ತಿದ್ದು, ಇದರಿಂದ ರೈತರು ಜಮೀನು ಕಳೆದುಕೊಳ್ಳುತ್ತಿದ್ದಾರೆ. ಬಹುತೇಕ ರೈತರು ತುಂಡು ಭೂಮಿ ಹೊಂದಿದ್ದು, ಜೀವನಕ್ಕೆ ಇದೇ ಆಧಾರವಾಗಿದೆ. ಎಲ್ಲರೂ ಸಣ್ಣ, ಅತಿ ಸಣ್ಣ ರೈತರಿದ್ದು ಸಂಕಷ್ಟಕ್ಕೆ ಸಿಲುಕಲ್ಲಿದ್ದಾರೆ. ಅಂತಹ ರೈತರಿಗೆ ಪರ್ಯಾಯವಾಗಿ ಭೂಮಿ ನೀಡಬೇಕು. ಅಥವಾ ಶಾಶ್ವತ ನ್ಯಾಯಯುತ ಪರಿಹಾರ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು.ಜಿಲ್ಲಾಧಿಕಾರಿ ಪರವಾಗಿ ತಹಸೀಲ್ದಾರ್ ರೇಖಾ ಅವರು ರೈತರ ಮನವಿ ಸ್ವೀಕರಿಸಿದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮುಖಂಡರಾದ ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ವರಕೋಡು ನಾಗೇಶ್, ಕೆಂಡಗಣಪ್ಪ, ಬನ್ನೂರು ಸೂರಿ, ವಾಜಮಂಗಲ ಮಹದೇವು, ಕಾಟೂರು ಮಹದೇವಸ್ವಾಮಿ, ಕಾಟೂರು ನಾಗೇಶ್, ಕೊಡನಹಳ್ಳಿ ಸೋಮಣ್ಣ, ಅಂಬಳೆ ಮಂಜುನಾಥ್, ದೇವನೂರು ಮಹದೇವಸ್ವಾಮಿ, ಸಾತಗಳ್ಳಿ ಬಸವರಾಜ್, ಕೂರ್ಗಳ್ಳಿ ರವಿಕುಮಾರ್, ಪಿ. ನಾಗೇಂದ್ರ, ಮಾರ್ಬಳ್ಳಿ ಬಸವರಾಜ, ಸಿದ್ದರಾಮ, ನಂಜುಂಡಸ್ವಾಮಿ, ಗಣೇಶ್, ವಾಜಮಂಗಲ ನಾಗೇಂದ್ರ, ಚಂದ್ರು, ಸ್ವಾಮಿ, ಪುಟ್ಟಸ್ವಾಮಿ, ಶಿವಕುಮಾರ್, ಲೀಲಾ ಮೊದಲಾದವರು ಇದ್ದರು.