ಜನನಿಬಿಡ ಸ್ಥಳದಲ್ಲಿ ಬೀದಿನಾಯಿಗೆ ಆಹಾರವನ್ನು ನೀಡುವಂತಿಲ್ಲ: ಉತ್ತರ ಪಾಲಿಕೆ ಆಯುಕ್ತ

KannadaprabhaNewsNetwork |  
Published : May 28, 2026, 03:45 AM IST
Dog

ಸಾರಾಂಶ

ರಾಜಧಾನಿಯಲ್ಲಿ ಇನ್ನು ಮುಂದೆ ಬೀದಿ ನಾಯಿಗಳಿಗೆ ಆಹಾರ ಎಲ್ಲಿ ನೀಡಬೇಕು, ಯಾವ ಸ್ಥಳದಲ್ಲಿ ವಿತರಿಸಬೇಕು ಎಂಬ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದ್ದು, ಶ್ವಾನಪ್ರಿಯರು ಕಡ್ಡಾಯವಾಗಿ ಮಾರ್ಗಸೂಚಿ ಅನುಸರಿಸಬೇಕೆಂದು ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ತಿಳಿಸಿದ್ದಾರೆ.

 ಬೆಂಗಳೂರು :  ರಾಜಧಾನಿಯಲ್ಲಿ ಇನ್ನು ಮುಂದೆ ಬೀದಿ ನಾಯಿಗಳಿಗೆ ಆಹಾರ ಎಲ್ಲಿ ನೀಡಬೇಕು, ಯಾವ ಸ್ಥಳದಲ್ಲಿ ವಿತರಿಸಬೇಕು ಎಂಬ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದ್ದು, ಶ್ವಾನಪ್ರಿಯರು ಕಡ್ಡಾಯವಾಗಿ ಮಾರ್ಗಸೂಚಿ ಅನುಸರಿಸಬೇಕೆಂದು ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಆಹಾರ ನೀಡುವಂತಿಲ್ಲ

ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ವಯಂಸೇವಕರು, ಸಂಘ ಸಂಸ್ಥೆಗಳು ಹಾಗೂ ಸೇವಾದಾರರು ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಶಾಲೆ, ಕಾಲೇಜು, ಆಸ್ಪತ್ರೆ, ಅಂಗನವಾಡಿ, ಧಾರ್ಮಿಕ ಸ್ಥಳಗಳು, ಸ್ಪೋರ್ಟ್ಸ್ ಕ್ಲಬ್, ಕ್ರೀಡಾಂಗಣ, ಮಕ್ಕಳ ಆಟದ ಮೈದಾನ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಪ್ರದೇಶಗಳಲ್ಲಿ ಆಹಾರ ನೀಡುವಂತಿಲ್ಲ ಎಂದು ತಿಳಿಸಿದ್ದಾರೆ.

ಆಹಾರ ನೀಡುವವರು ನಿಗದಿತ ಸಮಯದಲ್ಲಿ ಮಾತ್ರ ಆಹಾರ ನೀಡಬೇಕು. ಆಹಾರ ನೀಡಿದ ಬಳಿಕ ಉಳಿದ ಆಹಾರ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ತೆರವುಗೊಳಿಸಿ ಸ್ಥಳವನ್ನು ಸ್ವಚ್ಛವಾಗಿರಿಸಬೇಕು. ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಡ್ಡಿ ಆಗುವಂತೆ ಆಹಾರ ನೀಡಬಾರದು. ನಾಯಿಗಳು ಗುಂಪುಗೂಡಿ ಸಾರ್ವಜನಿಕರಿಗೆ ಭಯ ಅಥವಾ ತೊಂದರೆ ಉಂಟುಮಾಡದಂತೆ ನೋಡಿಕೊಳ್ಳಬೇಕು. ಶಾಲಾ ಸಮಯ, ಆಸ್ಪತ್ರೆ ಪ್ರದೇಶ ಹಾಗೂ ಹೆಚ್ಚಿನ ಜನಸಂಚಾರ ಇರುವ ವೇಳೆಯಲ್ಲಿ ಆಹಾರ ನೀಡುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.

ಆಹಾರ ವಿತರಣೆ ಸ್ಥಳ ನಿಗದಿಗೂ ಮಾರ್ಗಸೂಚಿ:

ಇದೇ ವೇಳೆ ಆಹಾರ ನೀಡುವ ಸ್ಥಳಗಳ ಗುರುತಿಸುವಿಕೆಗಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದ ಸ್ಥಳಗಳನ್ನು ಗುರುತಿಸಿ, ಸಂಬಂಧಿತ ವಲಯ ಕಚೇರಿ ಅಥವಾ ಪಾಲಿಕೆಯ ಪಶುಪಾಲನಾ ವಿಭಾಗಕ್ಕೆ ಪ್ರಸ್ತಾವನೆ ನೀಡಲು ಕೋರಲಾಗಿದೆ.

ಸ್ವೀಕರಿಸಲಾದ ಪ್ರಸ್ತಾವನೆಗಳ ಕುರಿತು ನಗರ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕ ಹಿತಾಸಕ್ತಿ, ಮಕ್ಕಳ ಹಾಗೂ ಹಿರಿಯ ನಾಗರಿಕರ ಸುರಕ್ಷತೆ, ಸ್ವಚ್ಛತೆ ಮತ್ತು ಆರೋಗ್ಯದ ಮಾನದಂಡಗಳು, ವಾಹನ ಸಂಚಾರದ ಮೇಲೆ ಪರಿಣಾಮ, ಸ್ಥಳೀಯ ನಿವಾಸಿಗಳ ಅಭಿಪ್ರಾಯ, ನಾಯಿಗಳ ವರ್ತನೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಅಂಶಗಳನ್ನು ಪರಿಗಣಿಸಿ ಅಧಿಕೃತ ಆಹಾರ ವಿತರಣಾ ಸ್ಥಳಗಳಿಗೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ವಲಯ ಕಚೇರಿ ಅಥವಾ ಪಶುಪಾಲನಾ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬರ ಸ್ಥಿತಿ ವಿವರಣೆಗೆ ಸರ್ವಪಕ್ಷ ನಿಯೋಗ : ಡಿಕೆಶಿ
ಕೆ.ಆರ್.ಪುರ- ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಗೆ ₹450 ಕೋಟಿ : ಕೃಷ್ಣ ಬೈರೇಗೌಡ