ನವೆಂಬರ್‌ 22ಕ್ಕೆ ಸ್ಪೀಕರ್‌ ಸಲೀಂಅಹ್ಮದಗೆ ಅಭಿನಂದನಾ ಸಮಾರಂಭ

KannadaprabhaNewsNetwork |  
Published : Nov 20, 2026, 02:00 AM IST
ಸಲೀಂಅಹ್ಮದ | Kannada Prabha

ಸಾರಾಂಶ

ಧಾರವಾಡ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ವಿಧಾನ ಪರಿಷತ್‌ನ ನೂತನ ಸಭಾಪತಿ ಸಲೀಂ ಅಹ್ಮದ್‌ ಅವರಿಗೆ ಇಲ್ಲಿನ ಗೋಕುಲ್‌ ರಸ್ತೆಯ ಎನ್‌ಡಬ್ಲ್ಯುಕೆಆರ್‌ಟಿಸಿ ಸಭಾಭವನದಲ್ಲಿ ನ.22ರಂದು ಸಂಜೆ 4ಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಹುಬ್ಬಳ್ಳಿ:

ಧಾರವಾಡ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ವಿಧಾನ ಪರಿಷತ್‌ನ ನೂತನ ಸಭಾಪತಿ ಸಲೀಂ ಅಹ್ಮದ್‌ ಅವರಿಗೆ ಇಲ್ಲಿನ ಗೋಕುಲ್‌ ರಸ್ತೆಯ ಎನ್‌ಡಬ್ಲ್ಯುಕೆಆರ್‌ಟಿಸಿ ಸಭಾಭವನದಲ್ಲಿ ನ.22ರಂದು ಸಂಜೆ 4ಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ವಿಶ್ವನಾಥ ಕುಲಕರ್ಣಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಸಲೀಂ ಅಹ್ಮದ್‌ ಅವರು ಚಿಕ್ಕವರಿಂದ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಗಾಗಿ ದುಡಿದಿದ್ದಾರೆ. ಎನ್‌ಎಸ್‌ಯುಐ ಅಧ್ಯಕ್ಷ ಸ್ಥಾನ, ನೆಹರು ಯುವ ಕೇಂದ್ರದ ಮಹಾನಿರ್ದೇಶಕರಾಗಿ, ಪಕ್ಷದ ವಿವಿಧ ಹಂತಗಳಲ್ಲಿ ಜವಾಬ್ದಾರಿಯುತ ಕಾರ್ಯನಿರ್ವಹಿಸಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಇದೀಗ ಸಭಾಪತಿ ಆಗಿರುವುದು ಧಾರವಾಡ ಜಿಲ್ಲೆಗೆ ಹೆಮ್ಮೆಯ ಸಂಗತಿ. ಇದೇ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ನಾಗರಿಕ ವೇದಿಕೆಯಿಂದ ಪಕ್ಷಾತೀತವಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.ಸಮಾರಂಭದ ಅಂಗವಾಗಿ ಗೋಕುಲ್‌ ರಸ್ತೆಯ ಹೊಸ ಬಸ್‌ ನಿಲ್ದಾಣದಿಂದ ಸಭಾಭವನದ ವರೆಗೆ ಮೆರವಣಿಗೆ ನಡೆಸಲಾಗುತ್ತಿದೆ. ಉತ್ತರ ಕರ್ನಾಟಕ ಜಾನಪದ ಕಲಾ ತಂಡಗಳಾದ ಡೊಳ್ಳುಕುಣಿತ, ದಾಲಪಟಾ ಕಲಾವಿದರ ತಂಡ, ಗೊಂಬೆ ಕುಣಿತದ ತಂಡದೊಂದಿಗೆ ಸಾರೋಟದ ಮೂಲಕ ನೂತನ ಸಭಾಪತಿ ಸಲೀಂ ಅಹ್ಮದ್‌ ಅವರನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು. ಆದ್ದರಿಂದ ಜಿಲ್ಲೆಯ ಮಾಜಿ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಹು-ಧಾ ಮಹಾನಗರ ಪಾಲಿಕೆ ಸದಸ್ಯರು, ಜಿಪಂ, ತಾಪಂ, ಗ್ರಾಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆ, ಸಾಹಿತಿಗಳು, ಕವಿಗಳು ಹು-ಧಾ ಮಹಾನಗರದ ನಾಗರಿಕರು ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ವಿನಯ ಕುಲಕರ್ಣಿ, ಎನ್‌.ಎಚ್‌. ಕೋನರಡ್ಡಿ, ವಿಧಾನ ಪರಿಷತ್‌ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ ಪಾಲ್ಗೊಳ್ಳುವರು. ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆ ಸಂಚಾಲಕ ಶಿವಾನಂದ ಮುತ್ತಣ್ಣವರ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸದಾನಂದ ಡಂಗನವರ, ಧಾರವಾಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಜುಟ್ಟಲ, ಮುಜಾಹಿದ್‌ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ