* ಮಾದರಿ ಕಾರ್ಯಕ್ರಮ
ಪೀಳಿಗೆಯಿಂದ ಪೀಳಿಗೆಗೆ ಪಾರಂಪರಿಕ ಕುಲಕಸುಬುಗಳನ್ನು ಮುಂದುವರಿಸಿಕೊಂಡು ಬಂದಿರುವ ಕುಟುಂಬಗಳನ್ನು ಗುರುತಿಸಿ ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಎಬಿವಿಪಿ ಬೀದರ್ ಜಿಲ್ಲಾ ಹಿರಿಯ ಕಾರ್ಯಕರ್ತರ ‘ಶರಣ ಸಂಕುಲ’ ಗೆಳೆಯರ ಬಳಗದಿಂದ ನ.29ರಂದು 21 ಬಗೆಯ ಕುಲಕಸುಬುಗಳಲ್ಲಿ ತೊಡಗಿಸಿಕೊಂಡಿರುವ 50 ಕುಟುಂಬಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸಂಚಾಲಕರಾದ ವೀರಣ್ಣ ಬ್ಯಾಗೋಟಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧೆಡೆ ನೆಲೆಸಿರುವ ವಿದ್ಯಾರ್ಥಿ ಪರಿಷತ್‌ನ ಮಾಜಿ ಕಾರ್ಯಕರ್ತರು ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರ ಜತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧರಿಸಿದ್ದರು. ಅದರ ಫಲಶೃತಿಯಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ ಎಂದು ತಿಳಿಸಿದರು.120 ಕುಟುಂಬಗಳಿಗೆ ಖುದ್ದು ಭೇಟಿ:
ಕನಿಷ್ಠ ಮೂರು ತಲೆಮಾರುಗಳಿಂದ ಒಂದೇ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ಹಾಗೂ ಈವರೆಗೆ ಯಾವುದೇ ಮನ್ನಣೆ ಪಡೆಯದೆ ಎಲೆಮರೆಯ ಕಾಯಿಯಂತೆ ಶ್ರಮಿಸುತ್ತಿರುವ ವೃತ್ತಿದಾರರಿಗೆ ಆದ್ಯತೆ ನೀಡಲಾಗಿದೆ. ಪ್ರತಿ ಕುಲಕಸುಬಿನಿಂದ ಗರಿಷ್ಠ ಮೂರು ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಸಮಾರಂಭದಲ್ಲಿ ಕುಟುಂಬದ ಸದಸ್ಯರು ಸೇರಿದಂತೆ ಸುಮಾರು 150 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ನ.29ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಕೆ.ಇ.ಬಿ. ಎದುರು ಇರುವ ಪೂಜ್ಯ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ಪ್ರಾಂತದ ಮಾಜಿ ಅಧ್ಯಕ್ಷ ಪ್ರೊ.ಎಸ್.ಬಿ. ಸಜ್ಜನಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಕ್ಷೇತ್ರದ ಧುರಿಣರಾದ ಗುರುನಾಥ ಜ್ಯಾಂತೀಕರ್, ವಿದ್ಯಾರ್ಥಿ ಪರಿಷತ್ತಿನಿಂದ ಗುರುತಿಸಿಕೊಂಡಿರುವ ಗುರುನಾಥ ರಾಜಗೀರಾ, ಸುಭಾಷ ಬಿರಾದಾರ, ರಾಜಕುಮಾರ ನೇಮತಾಬಾದೆ, ಅಮೃತರಾವ ಹೊಸಮನಿ ಉಪಸ್ಥಿತರಿದ್ದರು.
ಚಿತ್ರ 27ಬಿಡಿಆರ್53: