ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಬಂದು ಅದಕ್ಕೆ ಆಕ್ಷೇಪಗಳ ಅವಧಿಯೂ ಮುಗಿದು ಇದೀಗ ಅಧಿಕೃತವಾಗಿ ರಾಜ್ಯ ಸರ್ಕಾರ ಮೀಸಲಾತಿಯ ಅಧಿಸೂಚನೆಯನ್ನೂ ಹೊರಡಿಸಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದೇ ತಡ, ಕಾರ್ಯಕರ್ತರು ಹಾಗೂ ಮುಖಂಡರುಗಳು ನಮಗೇ ಈ ಬಾರಿ ಟಿಕೆಟ್ ನೀಡಬೇಕು ಎಂದು ತಮ್ಮ ಪಕ್ಷದ ಮುಖಂಡರ ಬಳಿ ಟಿಕೇಟ್‌ಗಾಗಿ ಹಕ್ಕು ಮಂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಬಂದು ಅದಕ್ಕೆ ಆಕ್ಷೇಪಗಳ ಅವಧಿಯೂ ಮುಗಿದು ಇದೀಗ ಅಧಿಕೃತವಾಗಿ ರಾಜ್ಯ ಸರ್ಕಾರ ಮೀಸಲಾತಿಯ ಅಧಿಸೂಚನೆಯನ್ನೂ ಹೊರಡಿಸಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದೇ ತಡ, ಕಾರ್ಯಕರ್ತರು ಹಾಗೂ ಮುಖಂಡರುಗಳು ನಮಗೇ ಈ ಬಾರಿ ಟಿಕೆಟ್ ನೀಡಬೇಕು ಎಂದು ತಮ್ಮ ಪಕ್ಷದ ಮುಖಂಡರ ಬಳಿ ಟಿಕೇಟ್‌ಗಾಗಿ ಹಕ್ಕು ಮಂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.ನ್ಯಾಮತಿ ತಾಲೂಕಿನ ಬೆಳಗುತ್ತಿ ಕ್ಷೇತ್ರ ಎಸ್ಸಿ ಮೀಸಲಾತಿಗೆ ನಿಗದಿಯಾಗಿರುವ ಕಾರಣ, ಬೆಳಗುತ್ತಿ ಜಿ.ಪಂ. ಕ್ಷೇತ್ರದ ಎಸ್ಸಿಮೋರ್ಚಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ನಮ್ಮ ಮಾದಿಗ ಸಮುದಾಯಕ್ಕೆ ಈ ಬಾರಿ ಟಿಕೆಟ್ ನೀಡಬೇಕೆಂದು ತಮ್ಮ ಅಹವಾಲನ್ನು ಸಲ್ಲಿಸಿದರು.

ಮಾದಿಗ ಸಮಾಜದ ಮುಖಂಡ ಮಾದೇನಹಳ್ಳಿ ಶೇಖರಪ್ಪ ಮಾತನಾಡಿ, ಇದೇ ಮೊದಲ ಬಾರಿಗೆ ಬೆಳಗುತ್ತಿ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ನಾವು ಸಹ ಈ ಬಾರಿ ಜಿ.ಪಂ. ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಮ್ಮ ಸಮಾಜದ ಮುಖಂಡರುಗಳು ತಯಾರಾಗಿದ್ದಾರೆ ಎಂದರು.

ಇದುವರೆಗೂ ಮೀಸಲಾತಿ ನಮಗೆ ಬಂದಿರಲಿಲ್ಲ, ಸುದೈವ ಈ ಬಾರಿ ನಮ್ಮ ಸಮಾಜಕ್ಕೆ ಎಸ್ಸಿ ಮೀಸಲಾತಿ ಸಿಕ್ಕಿದೆ, ಬೆಳಗುತ್ತಿ ಕ್ಷೇತ್ರದಲ್ಲಿ ಮಾದಿಗ ಸಮಾಜವೇ ಹೆಚ್ಚು ಮತದಾರರನ್ನು ಹೊಂದಿದೆ, ಹಾಗಾಗಿ ಈ ಬಾರಿಯ ಜಿ.ಪಂ. ಕ್ಷೇತ್ರದ ಟಿಕೆಟ್ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿದ್ದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರಿಗೆ ಮನವಿ ಸಲ್ಲಿಸಿದ್ದೇವೆ, ಅವರ ನಿರ್ಧಾರಕ್ಕೆ ನಾವು ತಲೆಬಾಗುತ್ತೇವೆ ಎಂದರು.

ಬೆಳಗುತ್ತಿ ಕ್ಷೇತ್ರದ ಜಿ.ಪಂ. ಕ್ಷೇತ್ರದ ಎಸ್ಸಿ ಮೋರ್ಚಾದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಕ್ಷೇತ್ರಗಳ ಮೀಸಲಾತಿ ಅಷ್ಟೇ ಪ್ರಕಟ ಆಗಿದೆ, ಆದರೆ ಚುನಾವಣೆಯ ದಿನಾಂಕ ನಿಗದಿಯಾಗಿಲ್ಲ, ಬೆಳಗುತ್ತಿ ಕ್ಷೇತ್ರದ ಎಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದು ತೀರ್ಮಾನಿಸೋಣ, ಕಾರ್ಯಕರ್ತರ ತೀರ್ಮನವೇ ಅಂತಿಮ ಎಂದರು.

ನಮ್ಮ ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆ ಯಾವಾಗ ಬಂದರೂ ನಮ್ಮ ಕಾರ್ಯಕರ್ತರು ಸಿದ್ದರಿದ್ದಾರೆ, ಚುನಾವಣೆ ದಿನಾಂಕ ಘೋಷಣೆ ಮಾಡಲಿ ಎಂದರು.

ತಾಲೂಕು ಬಿಜಪಿ ಅಧ್ಯಕ್ಷ ಅರಕೆರೆ ನಾಗರಾಜ್, ಬಿಜೆಪಿ ಮುಖಂಡರಾದ ನಾಗರಾಜಪ್ಪ, ಹಾಲೇಶಪ್ಪ, ಚಂದ್ರಶೇಖರ್, ಮಲ್ಲೇಶಪ್ಪ, ಮಂಜು, ಅಣ್ಣಪ್ಪ, ಸುರೇಶ್, ಕುಂದೂರು ಶಾಂತರಾಜ್ ಹಾಗೂ ಇತರರು ಇದ್ದರು.