ಮೊಗಲಪ್ಪ ಬಿ. ನಾಯಕಿನ್
ಮುಂಗಾರು ಪೂರ್ವ ಮಳೆ ಉತ್ತಮ ಆರಂಭ ಕಂಡಿದ್ದು, ರೈತರ ಮೊಗದಲ್ಲಿ ಖುಷಿ ಮೂಡಿಸಿದೆ. ಬೀಜಗಳ ಬಿತ್ತನೆಗಾಗಿ ಸಿದ್ಧತೆಯಲ್ಲಿ ಇರುವಾಗಲೇ, ನಿಗದಿತ ದರಕ್ಕಿಂತ ದುಪ್ಪಟ್ಟು ದರದಲ್ಲಿ ರಸಗೊಬ್ಬರಗಳ ಮಾರಾಟ ಮಾಡುತ್ತಿರುವುದರ ಜೊತೆಗೆ, ಹೆಚ್ಚಿನ ಹಣದ ನೀಡದಿದ್ದರೆ ದಾಸ್ತಾನು ಕೊರತೆ ನೆಪದಲ್ಲಿ ನೆರೆಯ ತೆಲಂಗಾಣಕ್ಕೆ ಮಾರಾಟ ಮಾಡುತ್ತಿರುವುದು ರೈತಾಪಿ ವಲಯದಲ್ಲಿ ಆಕ್ರೋಶ ಮೂಡಿಸಿದೆ.
ಡಿಎಪಿ 20:20:0:13, ಯೂರಿಯಾ ಹಾಗೂ 20:20, 19:19:19, 18:18:18 ಮುಂತಾದ ಸ್ಪಿಕ್, ಗೋದಾವರಿ, ಇಫ್ಕೊ ರಸಗೊಬ್ಬರಗಳಿಗೆ ಇಲ್ಲಿನ ರೈತರ ಬೇಡಿಕೆ ಹೆಚ್ಚಾಗಿದೆ. ಆದರೆ ದಾಸ್ತಾನು ಕೊರತೆ ಇದೆ ಎಂದು ರೈತರಿಗೆ ಬೇಡವಾದ ರಸಗೊಬ್ಬರ ನೀಡಲಾಗುತ್ತಿದೆ ಎಂದು ಇಲ್ಲಿನ ರೈತರು ಆರೋಪಿಸಿದ್ದಾರೆ.ಒಂದು ವೇಳೆ ಹೆಚ್ಚಿನ ದರ ನೀಡದಿದ್ದರೆ, ರಸಗೊಬ್ಬರ ಅಂಗಡಿ ಮಾಲೀಕರು ಇಲ್ಲಿನವರಿಗೆ ದಾಸ್ತಾನು ಕೊರತೆ ನೆಪ ಹೇಳಿ ನೆರೆಯ ತೆಲಂಗಾಣ ರಾಜ್ಯದ ಗಡಿ ಪ್ರದೇಶವಾಗಿರುವ ತಾಂಡೂರು, ಕೊಡಂಗಲ್, ಇಟ್ಲಾಪುರ, ಅನ್ನಸಾಗರ್, ಕಾನುಕುರ್ತಿ, ಮುನಕನುಪಲ್ಲಿ, ದಾಮರಗಿದ್ದ ಸೇರಿದಂತೆ ಇತರೆ ಗ್ರಾಮಗಳಿಂದ ಬರುವ ನೆರೆಯ ರಾಜ್ಯದ ಜನರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಪಟ್ಟಣದಲ್ಲಿ 12ಕ್ಕೂ ಹೆಚ್ಚು ರಸಗೊಬ್ಬರದ ಅಂಗಡಿಗಳಿವೆ, ಅವುಗಳಲ್ಲಿ ಬಹುತೇಕ ಅಂಗಡಿಗಳು ಲೈಸನ್ಸ್ ನವೀಕರಣ ಮಾಡಿಕೊಂಡಿಲ್ಲ ಎನ್ನಲಾಗುತ್ತಿದೆ. ಲೈಸನ್ಸ್ ನವೀಕರಣ ಮಾಡದ ಅಂಗಡಿಗಳ ಕುರಿತು ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವ್ಯಾಪಾರಿಗಳು ರೈತರಿಂದ ಸರಕಾರ ನಿಗದಿ ಪಡಿಸಿದ ದರಕ್ಕಿಂತ ಅಧಿಕ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಲಿರುವುದು ಇಲ್ಲಿ ಸಾಮಾನ್ಯವಾಗಿದ್ದು ಇದಕ್ಕೆ ಇಲ್ಲಿನ ರೈತಾಪಿ ವರ್ಗ ಕಂಗೆಟ್ಟಿದ್ದಾರೆ.ರಸಗೊಬ್ಬರ ವ್ಯಾಪಾರಿಗಳು ರೈತರಿಂದ ಹೆಚ್ಚಿನ ಹಣ ಪಡೆದು ರಸೀದಿಯನ್ನೂ ಸಹ ನೀಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಗೊಬ್ಬರ ಇಲ್ಲ ಎಂದು ಹೇಳುತ್ತಾರೆ.- ವೆಂಕಟಪ್ಪ, ರೈತ ಗುರುಮಠಕಲ್.
ಶರಣಬಸಪ್ಪ ಎಲ್ಲೇರಿ, ತಾಲೂಕು ಅಧ್ಯಕ್ಷ ಕರವೇ, ಗುರುಮಠಕಲ್