ದೇವಾಲದಕೆರೆಯಲ್ಲಿ ರಸಗೊಬ್ಬರ ಮಳಿಗೆ ಆರಂಭ

KannadaprabhaNewsNetwork |  
Published : Jul 06, 2025, 01:48 AM IST
5ಎಚ್ಎಸ್ಎನ್10 : ಹಾನುಬಾಳ್ ಕಾಫಿ ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ವಿಚಾರಣ ಸಂಕಿರಣದಲ್ಲಿ ಕಾಫಿ ಮಂಡಳಿ ಅದ್ಯಕ್ಷ   ದಿನೇಶ್ ಮಾತನಾಡಿದರು.  | Kannada Prabha

ಸಾರಾಂಶ

ಬೆಳೆಗಾರರಲ್ಲಿ ವೃತ್ತಿಪರತೆಯ ಕೊರತೆ ಕಾಡುತ್ತಿದೆ. ಯಾವುದೇ ಬೆಳೆಗೂ ಮಣ್ಣು, ನೀರು, ಗೊಬ್ಬರದ ಅಗತ್ಯವಿದೆ. ಇವುಗಳ ಬಳಕೆಯ ಬಗ್ಗೆ ಸಾಕಷ್ಟು ಬೆಳೆಗಾರರಿಗೆ ಅರಿವಿನ ಕೊರತೆ ಇದೆ. ಅಲ್ಲದೆ ಮಾರುಕಟ್ಟೆ ಜ್ಞಾನ ಸಹ ಅಗತ್ಯವಿದೆ. ತಮ್ಮ ಬೆಳೆಯನ್ನು ಯಾವಾಗ ಯಾವ ಬೆಲೆಗೆ ಮಾರಾಟ ಮಾಡಬೇಕು ಎಂಬ ಪರಿಕಲ್ಪನೆ ಹೊಂದುವುದು ಅಗತ್ಯ. ಗೊಬ್ಬರ ಬಳಕೆಯನ್ನು ಸಹ ಹೆಚ್ಚಿನ ಜಾಗೃತೆಯಿಂದ ಬಳಸುವ ಅಗತ್ಯವಿದೆ. ಸಮಯವಲ್ಲದ ಸಮಯದಲ್ಲಿ ಉಚಿತವಲ್ಲದ ಗೊಬ್ಬರ ನೀಡಿದರೆ ಹಣ ವ್ಯರ್ಥವಾಗಲಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ ಕೆ ದಿನೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಯುವುದು ಉತ್ತಮ ಲಕ್ಷಣವಲ್ಲ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ ಕೆ ದಿನೇಶ್ ಹೇಳಿದರು. ಶನಿವಾರ ತಾಲೂಕಿನ ದೇವಾಲದಕೆರೆ ಗ್ರಾಮದಲ್ಲಿ ಹಾನುಬಾಳು ಕಾಫಿ ಬೆಳೆಗಾರರ ಸಹಕಾರ ಸಂಘದ ವತಿಯಿಂದ ಔಷಧಿ ಮತ್ತು ರಸಗೊಬ್ಬರ ಮಾರಾಟ ಮಳಿಗೆಯನ್ನು ದೇವಾಲದಕೆರೆಯಲ್ಲಿ ಉದ್ಘಾಟಿಸಿದ ನಂತರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಮಲೆನಾಡಿನಲ್ಲಿ ಸಹಕಾರ ಸಂಘಗಳ ಸಂಖ್ಯೆ ತೀರ ಅಲ್ಪ. ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಾಕಷ್ಟು ಸಹಕಾರ ಸಂಘಗಳು ರಾಜಕೀಯದಿಂದಾಗಿ ನಾಶವಾಗಿವೆ. ಆದ್ದರಿಂದ ಸಹಕಾರ ಸಂಘದಲ್ಲಿ ರಾಜಕೀಯ ಬೆರೆಸಬಾರದು ಎಂದರು.ಬೆಳೆಗಾರರಲ್ಲಿ ವೃತ್ತಿಪರತೆಯ ಕೊರತೆ ಕಾಡುತ್ತಿದೆ. ಯಾವುದೇ ಬೆಳೆಗೂ ಮಣ್ಣು, ನೀರು, ಗೊಬ್ಬರದ ಅಗತ್ಯವಿದೆ. ಇವುಗಳ ಬಳಕೆಯ ಬಗ್ಗೆ ಸಾಕಷ್ಟು ಬೆಳೆಗಾರರಿಗೆ ಅರಿವಿನ ಕೊರತೆ ಇದೆ. ಅಲ್ಲದೆ ಮಾರುಕಟ್ಟೆ ಜ್ಞಾನ ಸಹ ಅಗತ್ಯವಿದೆ. ತಮ್ಮ ಬೆಳೆಯನ್ನು ಯಾವಾಗ ಯಾವ ಬೆಲೆಗೆ ಮಾರಾಟ ಮಾಡಬೇಕು ಎಂಬ ಪರಿಕಲ್ಪನೆ ಹೊಂದುವುದು ಅಗತ್ಯ. ಗೊಬ್ಬರ ಬಳಕೆಯನ್ನು ಸಹ ಹೆಚ್ಚಿನ ಜಾಗೃತೆಯಿಂದ ಬಳಸುವ ಅಗತ್ಯವಿದೆ. ಸಮಯವಲ್ಲದ ಸಮಯದಲ್ಲಿ ಉಚಿತವಲ್ಲದ ಗೊಬ್ಬರ ನೀಡಿದರೆ ಹಣ ವ್ಯರ್ಥವಾಗಲಿದೆ. ಆದ್ದರಿಂದ ಇಂತಹ ವಿಚಾರಣಾ ಸಂಕಿರಣಗಳಲ್ಲಿ ಬೆಳೆಗಾರರು ಭಾಗವಹಿಸುವುದು ಅಗತ್ಯ. ಸಾಕಷ್ಟು ಹೋರಾಟದ ಮೂಲಕ ಬೆಳೆಗಾರ ಸಾಲ ತೀರುವಳಿಗೆ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಈ ಯೋಜನೆಯ ಲಾಭ ಪಡೆಯಲು ಸಾಕಷ್ಟು ಬೆಳೆಗಾರರು ವಿಫಲರಾಗಿದ್ದು, ರಾಜ್ಯದಲ್ಲಿ ಸುಮಾರು ಆರು ಸಾವಿರ ಬೆಳೆಗಾರರು ಸುಸ್ತಿದಾರರಾಗಿದ್ದಾರೆ ಎಂದರು. ಕಾಫಿ ಬೆಳೆಗಾರರು ಹೆಚ್ಚೆಚ್ಚು ಮಾಹಿತಿ ಸಂಗ್ರಹಿಸುವುದರಿಂದ ಆರ್ಥಿಕ ವಾಗಿ ಅಭಿವೃದ್ಧಿ ಹೊಂದಬಹುದಾಗಿದೆ. ಕಾಫಿ ಬೆಳೆಗಿಂತ ಮತ್ತೊಂದು ಉತ್ತಮ ಬೆಳೆಯಿಲ್ಲ. ಎಲ್ಲ ರಂಗದಲ್ಲೂ ಕಷ್ಟಗಳಿರುತ್ತವೆ. ಕಷ್ಟಗಳನ್ನು ಮೆಟ್ಟಿ ನಿಂತಾಗ ಉತ್ತಮ ಬೆಳೆಗಾರರಾಗಬಹುದು ಎಂದರು. ಕಾಫಿ ಮಂಡಳಿಯಿಂದ ಕಾಫಿ ತೋಟಗಳಲ್ಲಿ ಆಧುನಿಕ ತಂತ್ರಜ್ಞಾನ ಆಳವಡಿಕೆಗೆ ಪರೀಕ್ಷೆಗಳು ನಡೆಯುತ್ತಿದೆ. ಇದರಿಂದ ಕಾರ್ಮಿಕ ಕೊರತೆ ನೀಗಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಕಾಫಿಗೆ ಉತ್ತಮ ಭವಿಷ್ಯವಿದ್ದು ನೆರಳಿನಾಶ್ರಯದಲ್ಲಿ ಬೆಳೆಯುವ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ. ಬೆಳೆಗಾರರು ಮರಗಳನ್ನು ಉಳಿಸಿಕೊಂಡು ಕಾಫಿ ಬೆಳೆಯುವುದು ಒಳ್ಳೆಯದು ಎಂದರು.

ಬೆಳೆಗಾರರು ಎಫ್‌ ಬಿಒ ಮಾಡಿಕೊಳ್ಳುವುದರಿಂದ ತಮ್ಮ ಕಾಫಿಗೆ ಉತ್ತಮ ಧಾರಣೆ ಪಡೆಯಬಹುದಾಗಿದೆ. ಕಾಫಿ ಮಂಡಳಿ ಇಂತಹ ನೂರು ಎಫ್‌ಬಿಒ ಸ್ಥಾಪನೆಗೆ ಸಿದ್ಧತೆ ನಡೆಸಿದೆ. ವೃತ್ತಿಗೌರವ ನಿಮ್ಮನ್ನು ಕೈ ಹಿಡಿಯಲಿದೆ. ತಾವು ಮಾಡುವ ಕೆಲಸದ ಬಗ್ಗೆ ನಿರಾಸಕ್ತಿ ಒಳ್ಳೆಯದಲ್ಲ ಎಂದರು. ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಿವಣ್ಣ ಮಾತನಾಡಿ, ಕಾಫಿ ಬೆಲೆ ವೇಗವಾಗಿ ಇಳಿಯುತ್ತಿದ್ದರೆ, ಏರಿಕೆ ನಿಧಾನಗತಿ ಸಾಗುತ್ತಿದೆ. ಬೆಳೆಗಾರರಿಗೆ ಹಣಕಾಸಿನ ನಿರ್ವಹಣೆ ಕಲಿಯುವ ಅಗತ್ಯವಿದೆ. ಇದರಿಂದ ಬೆಳೆಗಾರರು ಸಾಲದ ಸುಳಿಯಿಂದ ಹೊರ ಬರುವ ತಂತ್ರ ತಿಳಿಯಲಿದೆ. ಬೆಳೆಗಾರರ ಸಮಸ್ಯೆಗಳಿಗೆ ಒಗ್ಗೂಡಿ ಹೋರಾಟ ಮಾಡುವ ಅಗತ್ಯವಿದೆ. ಕೃಷಿಗೆ ಮಾಡುವ ಕೆಲಸವನ್ನು ತೋಟಗಳಿಗೂ ಮಾಡಲಾಗುತ್ತಿದೆ. ಆದರೆ, ವಾಣಿಜ್ಯ ಬೆಳೆ ಎಂಬ ಕಾರಣಕ್ಕೆ ಬೆಳೆಗಾರರನ್ನು ಹೀನಾಯವಾಗಿ ಕಾಣಲಾಗುತ್ತಿದೆ. ವಾಸ್ತವವಾಗಿ ಕಾಫಿ ಬೆಳೆಗಾರರು ಇನ್ನು ಸಂಕಷ್ಟದಲ್ಲಿದ್ದಾರೆ ಎಂದರು. ಸಹಕಾರ ಸಂಘದ ಅಧ್ಯಕ್ಷ ಹಾನಬಾಳ್ ಭಾಸ್ಕರ್ ಮಾತನಾಡಿ, ಗೊಬ್ಬರ ಕಲಬೆರಕೆ ತಡೆಗಟ್ಟುವ ನಿಟ್ಟಿನಲ್ಲಿ ಹುಟ್ಟುಹಾಕಲಾದ ಸಹಕಾರ ಸಂಘ ಕಳೆದ ಏಳು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತ ಬಂದಿದ್ದು ಲಾಭದ ದಾರಿಯಲ್ಲಿ ಸಾಗುತ್ತಿದೆ ಎಂದರು. ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಮಾತನಾಡಿ, ಬೆಳೆಗಾರರು ಸಹಕಾರ ಸಂಘದಲ್ಲಿ ವ್ಯವಹಾರ ನಡೆಸಿದರೆ ಸಂಘ ಅಭಿವೃದ್ಧಿ ಹೊಂದಲಿದೆ ಎಂದರು. ಮುಂದಿನ ದಿನಗಳಲ್ಲಿ ಸಹಕಾರ ಸಂಘಗಳಿಗೆ ಉತ್ತಮ ಅವಕಾಶವಿದ್ದು, ಬೆಳೆಗಾರರು ಒಂದಾಗಿ ಕೆಲಸ ಮಾಡಿದರೆ ಸಹಕಾರ ಸಂಘದಲ್ಲಿ ಅದ್ಭುತವಾದುದನ್ನು ಸಾಧಿಸಬಹುದಾಗಿದೆ ಎಂದರು.

ಮುಖಂಡರಾದ ಗುಂಡೆಗೌಡ, ನರೇಶ್, ರವಿ, ಚಂದ್ರಶೇಖರ ರತ್ನಕಾರ್, ರಾಜೀವ್, ಪ್ರತಿಮಾ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ