ವೆಸ್ಲಿ, ಲೂರ್ದು ಮಾತೆ, ಸಿಎಸ್ಐ ಲೇಔಟ್ ಚರ್ಚ್, ದೇವನೂರು ಚರ್ಚ್ ಸೇರಿ ವಿವಿಧೆಡೆ ಸಾಮೂಹಿಕ ಪ್ರಾರ್ಥನೆ
ಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾದ ಕ್ರಿಸ್‌ಮಸ್ ಹಬ್ಬವನ್ನು ನಗರ ಸೇರಿದತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಚರ್ಚ್ ಸರ್ಕಲ್‌ನಲ್ಲಿರುವ ಸಿಎಸ್‌ಐ ವೆಸ್ಲಿ ದೇವಾಲಯ, ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯ, ಸಿಎಸ್‌ಐ ಲೇಔಟ್‌ನ ಚರ್ಚ್, ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚರ್ಚ್, ದೇವನೂರು ಚರ್ಚ್, ಶಿರಾಗೇಟ್‌ನಲ್ಲಿರುವ ಚರ್ಚ್ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಚರ್ಚ್ ಗಳಲ್ಲಿ ಕ್ರೈಸ್ಥ ಬಾಂಧವರು ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಹಬ್ಬದ ಪ್ರಯುಕ್ತ ನಗರದಲ್ಲಿರುವ 7 ಸಿಎಸ್‌ಐ ಚರ್ಚ್, ಎರಡು ರೋಮನ್ ಕ್ಯಾಥೋಲಿಕ್ ಚರ್ಚೆ, ಒಂದು ಮಾರ್ಥಾಂಬ ಚರ್ಚ್ ಒಂದು ಫೆದರಲ್ ಚರ್ಚ್, 15 ಇಂಡಿಪೆಂಡೆಂಟ್ ಚರ್ಚ್ ಗಳು ಸೇರಿದಂತೆ ಎಲ್ಲ ಚರ್ಚ್‌ಗಳಲ್ಲಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದವು.
ಹಬ್ಬದ ವಿಶೇಷವಾಗಿ ತಯಾರಿಸಿದ್ದ ಸಿಹಿ ತಿಂಡಿಗಳನ್ನು ಸಹ ಕ್ರೈಸ್ತ ಬಾಂಧವರು ಪರಸ್ಪರ ಹಂಚಿ ತಿನ್ನುವ ಮೂಲಕ ಈ ಹಬ್ಬ ಶಾಂತಿ ಸೌಹಾರ್ದತೆ ಸಂಕೇತ ಎಂಬ ಸಂದೇಶವನ್ನು ಸಾರಿದರು.
ದೇವರು ಮನುಷ್ಯರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದನ್ನು ತೋರಿಸುವುದು ಈ ಹಬ್ಬದ ಉದ್ದೇಶ ಎಂದರು.
ಬಹಳಷ್ಟು ವರ್ಷಗಳ ಹಿಂದೆ ಏಸುಕ್ರಿಸ್ತ ಹುಟ್ಟಿದಾಗ ಅಂದಿನ ಸಾಮಾಜಿಕ, ಆರ್ಥಿಕವಾದ ಪರಿಸ್ಥಿತಿಗಳು, ರಾಜಕೀಯ, ಧಾರ್ಮಿಕವಾದ ಪರಿಸ್ಥಿತಿಗಳು, ಬಡವರು, ನಿರ್ಗತಿಕರಿಗೆ ವಿರುದ್ಧವಾಗಿ ದೌರ್ಜನ್ಯ, ಶೋಷಣೆ ಮಾಡುವಂತಹ ಸನ್ನಿವೇಶ ಇದ್ದಾಗ ಏಸುಕ್ರಿಸ್ತ ಅಂತಹವರ ಪರವಾಗಿ ಸಮಾಜದಲ್ಲಿ ಶಾಂತಿ, ಸಮಾಧಾನ ತಂದು ದೇವರು ಬಡವರ ಪರ ಇದ್ದಾನೆ ಎಂದು ಸಾರಿ ಹೇಳಿದಂತಹ ಹಬ್ಬ ಇದಾಗಿದೆ ಎಂದು ಹೇಳಿದರು.
ನಗರದ ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ಭಾನುವಾರ ರಾತ್ರಿ 11 ರಿಂದ ಮಧ್ಯರಾತ್ರಿವರೆಗೂ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಬೆಳಿಗ್ಗೆಯೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.