ಕನ್ನಡಪ್ರಭ ವಾರ್ತೆ ಮಡಿಕೇರಿಏಸು ಕ್ರಿಸ್ತನ ಜನ್ಮ ಸ್ಮರಣೆಗಾಗಿ ಆಚರಿಸುವ ಕ್ರಿಸ್ಮಸ್ ಹಬ್ಬವನ್ನು ಕೊಡಗು ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಶೃದ್ಧಾಭಕ್ತಿ, ಸಂಭ್ರಮ ಸಡಗರದಿಂದ ಆಚರಿಸಿದರು. ವಿವಿಧ ಚರ್ಚ್‌ಗಳಲ್ಲಿ ರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ, ಗೋದಲಿಯಲ್ಲಿ ಬಾಲಯೇಸುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯನ್ನು ಮೆರೆದರು.ಮಡಿಕೇರಿಯ ಸಂತ ಮೈಕಲರ ಚರ್ಚ್‌ನಲ್ಲಿ ಭಾನುವಾರ ಮಧ್ಯರಾತ್ರಿ ಮೈಸೂರಿನ ಸಂತ ಜೋಸೆಫ್ ಆಸ್ಪತ್ರೆಯ ನಿರ್ದೇಶಕ ಮನೋಜ್ ಇಮನ್ಯುವಲ್ ಡಿಸೋಜ ಗೋದಲಿನಲ್ಲಿ ಬಾಲ ಏಸುವಿನ ಪ್ರತಿಕೃತಿಯನ್ನಿರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಧರ್ಮಗುರು ಫಾ.ದೀಪಕ್ ಬಲಿಪೂಜೆ ನೆರವೇರಿಸಿ ಶಾಂತಿ ಸಂದೇಶ ಸಾರಿದರು. ವಿಶೇಷ ಪ್ರಾರ್ಥನೆಯಲ್ಲಿ ನೂರಾರು ಕ್ರೈಸ್ತ ಬಾಂಧವರು ಪಾಲ್ಗೊಂಡು ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.
ಬಾಲ ಏಸು ಜನನದ ಕುರಿತ ಹಾಡುಗಳನ್ನು ಸಂಗೀತದೊಂದಿಗೆ ಪಠಿಸಿದ ರೀತಿ ನೋಡುಗ ಭಕ್ತರಲ್ಲಿ ಭಕ್ತಿ ಭಾವನೆ ಉದ್ದೀಪನಗೊಳಿಸಿತ್ತು. ದೇವಾಲಯದಲ್ಲಿ ಕೇಕ್ ಕತ್ತರಿಸಿ ಭಕ್ತರಿಗೆ ಹಂಚಲಾಯಿತು. ಸೋಮವಾರವೂ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಪ್ರಾರ್ಥನೆ ಗಳು ಚರ್ಚ್‌ಗಳಲ್ಲಿ ನಡೆಯಿತು.ಕ್ರಿಸ್ಮಸ್ ಪ್ರಯುಕ್ತ ಆಕರ್ಷಕ ಗೋದಲಿಯನ್ನು ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿತ್ತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ, ಗೋಣಿಕೊಪ್ಪ, ಸಿದ್ದಾಪುರ ಸೇರಿದಂತೆ ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಪ್ರಯುಕ್ತ ವಿಶೇಷ ಬಲಿಪೂಜೆಗಳು ನಡೆದವು.ಕೇಕ್ ಹಂಚಿ ಸಂಭ್ರಮ: ದನದ ಕೊಟ್ಟಿಗೆಯಲ್ಲಿ ಜನಿಸಿದ ಸಂಕೇತವಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ಕೊಟ್ಟಿಗೆಯನ್ನು ನಿರ್ಮಿಸಿ ಅದರಲ್ಲಿ ಬಾಲ ಏಸುವಿನ ಮೂರ್ತಿ ಮಲಗಿಸಿ ಪ್ರಾರ್ಥಿಸಿದರು. ಬಳಿಕ ಪರಸ್ಪರ ಕೇಕ್ ಹಂಚಿ ಸಂಭ್ರಮಿಸಿದರು. ಹಬ್ಬದ ಪ್ರಯುಕ್ತ ಮನೆಯನ್ನು ವಿದ್ಯುತ್ ದೀಪಾಲಂಕಾರ ಮಾಡಿ, ನಕ್ಷತ್ರ ದೀಪ ತೂಗು ಹಾಕಿ ಸಂಭ್ರಮಿಸಿದರು.