ಧಾರವಾಡ:

ಹಿಂದೂ ಭಾರತದ ಪ್ರಾಣ. ಹಿಂದೂ ಧರ್ಮ ಜನಿವಾರ, ಉಡದಾರವಲ್ಲ ಅದೊಂದು ಮನಸ್ಸುಗಳು ಜೋಡಿಸುವ ಸೇತುವೆ. ಓರ್ವ ಮಾನವ ಮಹಾನ್ ಮಾನವನಾಗುವ ಜತೆಗೆ ಮಾಧವನಾಗುವುದೇ ಹಿಂದೂ ಧರ್ಮದ ಮೂಲ ಧ್ಯೇಯ ಎಂದು ಭಾರತೀಯ ಶಿಕ್ಷಣ ಮಂಡಳದ ಸಂಘಟಕ ಶಂಕರಾನಂದ ಹೇಳಿದರು.

ಇಲ್ಲಿಯ ಕಮಲಾಪೂರ-ಮಾಳಾಪುರ ಉಪನಗರ ಹಿಂದೂ ಸಮ್ಮೇಳನ ಸಮಿತಿಯು ನಗರದ ಕಮಲಾಪೂರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ವಿರಾಟ್ ಹಿಂದೂ ಸಮ್ಮೇಳನ ಉದ್ಘಾಟಿಸಿದ ಅವರು, ಹಿಂದೂ ಜಾತಿ, ಮತ, ಪಂಥವಲ್ಲ, ಅದೊಂದು ಜೀವನ ಪದ್ಧತಿಯಾಗಿದೆ. ಇದು ಪ್ರತಿಯೊಬ್ಬರ ಮಸ್ತಕದಲ್ಲಿ ಬಂದಾಗ ಹಿಂದೂ ಧರ್ಮದ ಉಳಿವು ಸಾಧ್ಯ ಎಂದರು.

1947ರಲ್ಲಿ ಪರಕೀಯರ ಸಂಕೋಲೆಯಿಂದ ಬಿಡುಗಡೆಗೊಂಡ ಭಾರತವು ನಮ್ಮ ನೀತಿಗಳಡಿ ನಡೆದಿಲ್ಲ. ಪರಕೀಯರ ನೀತಿಗಳಲ್ಲಿಯೇ ಇಂದಿಗೂ ದೇಶ ಮುನ್ನಡೆದ ಕಾರಣ ಭಾರತವಾಗಿಲ್ಲ. 145 ಕೋಟಿ ಜನಸಂಖ್ಯೆ ಹೊಂದಿದ ದೊಡ್ಡ ಭಾರತದ ಹೆಗಲ ಮೇಲೆ ಇಂಡಿಯಾ ಸವಾರಿ ಮಾಡುತ್ತಿದೆ ಎಂದು ವಿಷಾದಿಸಿದರು. ಪ್ರತಿ ಮನೆ, ಮನ ಹಾಗೂ ಸಮಾಜದಲ್ಲಿ ಹಿಂದುತ್ವ ಉಸಿರಾಡಬೇಕು. ಆಚಾರ-ವಿಚಾರ, ಆಹಾರ-ವಿಹಾರ, ಉಡುಗೆ-ತೊಡುಗೆಯಲ್ಲಿ ದೇಶಿಯತೆ ಪ್ರಜ್ವಲಿಸಬೇಕು. ಅಲ್ಲದೇ ನಾಡಿನ ಹಿಂದೂಗಳು ಒಗ್ಗೂಡಿ, ಇಂಡಿಯಾ ತೆಗೆದು ಭಾರತ ನಿರ್ಮಿಸುವಂತೆ ಕರೆ ನೀಡಿದರು.ನಯಾಗರದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತೀಕ ಸಜ್ಜನ ಸ್ವಾಗತಗೀತೆ ಹಾಡಿದರು. ಸಂತೋಷ ಬಡಿಗೇರ ಸ್ವಾಗತಿಸಿದರು. ರಮೇಶ ತಳಗೇರಿ ನಿರೂಪಿಸಿದರು. ಸಮ್ಮೇಳನ ನಿಮಿತ್ತ ಗಣಪತಿ ದೇವಸ್ಥಾನದಿಂದ ಶೋಭಾಯಾತ್ರೆಗೆ ಜೋಡೆತ್ತಿನ ಮೆರವಣಿಗೆ, ಮುತ್ತೈದೆಯರ ಪೂರ್ಣಕುಂಭ, ಮೈಸೂರು ಬೊಂಬೆ ಕುಣಿತ, ಝಾಂಜ್ ಮೇಳ, ಕೌಂಸಾಳಿ, ವೀರಪುರುಷರ ಪುಟಾಣಿಗಳ ಛೇದ್ಮವೇಷ ಮೆರಗು ತುಂಬಿತು. ಉಪ್ಪಿನಬೆಟಗೇರಿ ಮಲ್ಲಕಂಬ ಅಕಾಡೆಮಿಯ ಹಲವು ಮಕ್ಕಳು ಪ್ರದರ್ಶಿಸಿದ ಮಲ್ಲಕಂಬ ಮತ್ತು ಹೆಣ್ಣು ಮಕ್ಕಳ ರೋಪಿಂಗ್ ಪ್ರದರ್ಶನ ನೆರದ ಪ್ರೇಕ್ಷಕರಲ್ಲಿ ರೋಮಂಚನ ಸೃಷ್ಟಿಸಿತು.