ಶಿರಸಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ ಶಿರಸಿಇಂಗ್ಲಿಷ್ ಭಾಷೆಯ ಮೇಲಿನ ಅತಿಯಾದ ವ್ಯಾಮೋಹದಿಂದ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲು ಮುಚ್ಚುತ್ತಿರುವುದಕ್ಕೆ ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ನಗರದ ಬಣ್ಣದ ಮಠದ ಗುರು ಸಿದ್ದೇಶ್ವರ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಶಿರಸಿ ತಾಲೂಕು ಘಟಕ ಹಮ್ಮಿಕೊಂಡ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಪಾಲಕರು ಕಳುಹಿಸುತ್ತಿಲ್ಲ. ಇದು ಮುಂದೊಂದು ದಿನ ಬಹಳ ಅಪಾಯಕಾರಿಯಾಗಲಿದೆ. ಅದ್ಭುತವಾದ ಭಾಷೆ ನಮ್ಮ ಕನ್ನಡ. ಇದು ಹೃದಯ ಭಾಷೆ. ಇಲ್ಲಿ ಮೋಸ, ಕಪಟಗಳಿಲ್ಲ. ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನ ವಿರಬೇಕು. ಆಗ ನಮ್ಮ ನಾಡು ನುಡಿ ಬೆಳೆಯುತ್ತದೆ ಎಂದರು.
ವಿವಿಧ ಲೇಖಕರ 9 ಕೃತಿಗಳನ್ನು ಬಿಡುಗಡೆಗೊಳಿಸಿದ ಹಿರಿಯ ಸಹಕಾರಿ ಎಸ್.ಕೆ. ಭಾಗ್ವತ್ ಸಿರ್ಸಿಮಕ್ಕಿ ಮಾತನಾಡಿ, ಶಿರಸಿಯಲ್ಲಿ ಸಾಹಿತ್ಯ ಭವನದ ಅವಶ್ಯಕತೆ ಇದೆ. ಇದರ ಬಗ್ಗೆ ಮನವಿಯನ್ನು ನೀಡಿದರೆ ಸಾಹಿತ್ಯ ಭವನದ ವಿಚಾರವನ್ನು ಶಾಸಕರ ಗಮನಕ್ಕೆ ತರುತ್ತೇನೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೂ ಸಾಹಿತ್ಯ ಕ್ಷೇತ್ರದ ಸಂಬಂಧ ಇರಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಮುನ್ನೆಡೆಯುತ್ತಾ ಹೋದರೆ ನಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.
ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ರಾಜೀವ ಅಜ್ಜೀಬಳ ಮಾತನಾಡಿ, ಡಿ.ಎಸ್. ನಾಯ್ಕ ಅವರನ್ನು ಸರ್ವಾಧ್ಯಕ್ಷ ಸ್ಥಾನದಲ್ಲಿ ಕಂಡು ಬಹಳ ಸಂತಸವಾಗುತ್ತಿದೆ. ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಸರ್ಕಾರದಿಂದ ಸಾಹಿತ್ಯ ಸಮ್ಮೇಳನಕ್ಕೆ ಅನುದಾನಗಳು ಬರುತ್ತಿಲ್ಲ. ಮನಸ್ಸಿದ್ದರೆ ಕಾರ್ಯಕ್ರಮಗಳನ್ನು ಮಾಡಬಹುದು. ಆದರೆ, ಅನುದಾನದ ಅವಶ್ಯಕತೆ ಸಾಕಷ್ಟಿರುತ್ತದೆ ಎಂದರು.
ಶಿರಸಿ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಕೆ. ಮಹೇಶ ಸಮ್ಮೇಳನಾಧ್ಯಕ್ಷ ಡಿ.ಎಸ್. ನಾಯ್ಕ ಅವರನ್ನು ಸಭೆಗೆ ಪರಿಚಯಿಸಿದರು. ಬಣ್ಣದ ಮಠದ ಶಿವಲಿಂಗ ಸ್ವಾಮಿಗಳು ಸರ್ವಾಧ್ಯಕ್ಷ ಡಿ.ಎಸ್. ನಾಯ್ಕ ದಂಪತಿಯನ್ನು ಗೌರವಿಸಿದರು. ಇತ್ತೀಚೆಗೆ ಅಗಲಿದ ಸಾಹಿತಿ ಡಿ.ಎಂ. ಭಟ್ ಕುಳವೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಸಾಪ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಶಿರಸಿಯಲ್ಲಿ ನಡೆಯುವಷ್ಟು ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ಬೇರೆಲ್ಲೂ ನಡೆಯುವುದಿಲ್ಲ. ಇಂತಹ ಶ್ರೇಷ್ಠ ಪುಣ್ಯ ಭೂಮಿ ಶಿರಸಿ. ಕನ್ನಡದ ಕಾರ್ಯಕ್ರಮಗಳನ್ನು ಮಾಡಲೂ ಅಡ್ಡಗಾಲು ಹಾಕುವವರೂ ಇದ್ದಾರೆ. ಸಂಘಟನೆ ಮಾಡುವುದು ಹೇಳಿದಷ್ಟು ಸುಲಭವಲ್ಲ. ಅನುದಾನಗಳಿಲ್ಲದೇ ಸಮ್ಮೇಳನ ನಡೆಸಲಾಗುತ್ತಿದೆ. ನಿರ್ವಹಣಾ ಅನುದಾನವೂ ವಿಲ್ಲದೇ ನಾವು ಸಾಹಿತ್ಯ ಪರಿಷತ್ತನ್ನು ನಡೆಸುತ್ತಿದ್ದೇವೆ. ಕನ್ನಡದ ಕೆಲಸಕ್ಕಾಗಿಯೇ ಕಟ್ಟಿದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಸಮ್ಮೇಳನಕ್ಕೆ ಮಾತ್ರ ಪರಿಷತ್ತು ಸೀಮಿತವಾಗದೇ ನಮ್ಮ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ ಎಂದರು.
ಶಾಲೆಗಳಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಸಿಗುವುದಿಲ್ಲ. ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದರೆ, ಸರ್ಕಾರದ ನಿಯಮಗಳಿಂದ ತೊಂದರೆಯಾಗುತ್ತಿದ್ದು, ಸರ್ಕಾರ ಶಾಲಾ- ಕಾಲೇಜುಗಳಲ್ಲಿ ಸಾಹಿತ್ಯ ಕಾರ್ಯಕ್ರಮ ಮಾಡುತ್ತಿಲ್ಲ. ಈ ನಡುವೆ ಕನ್ನಡದ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಶಿರಸಿ ತಾಲೂಕಿನಲ್ಲೂ 30ಕ್ಕೂ ಅಧಿಕ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದೆ ಎಂದರು.ಕಸಾಪ ಶಿರಸಿ ತಾಲೂಕು ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಾಜೀವ ಅಜ್ಜೀಬಳ ಅವರು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಡಿ.ಎಸ್. ನಾಯ್ಕ ಅವರಿಗೆ ಹಸ್ತಾಂತರಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಾಜೀವ ಅಜ್ಜೀಬಳ, ಕಸಾಪ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ, ಶಿರಸಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಸಾಹಿತ್ಯ ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ, ಬಣ್ಣದ ಮಠದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ, ಕಸಾಪ ಶಿರಸಿ ಘಟಕದ ಗೌರವ ಕಾರ್ಯದರ್ಶಿ ವಾಸುದೇವ ಶಾನುಭಾಗ, ಶಿರಸಿ ಘಟಕದ ಗೌರವ ಕೋಶಾಧ್ಯಕ್ಷ ವಿ.ಆರ್. ಹೆಗಡೆ ಮತ್ತಿಘಟ್ಟ, ಮುಕ್ತಕ ಕವಿ ಕೃಷ್ಣ ಪದಕಿ, ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಹಿರೇಕೈ, ಕಸಾಪ ಸಿದ್ದಾಪುರ ಘಟಕದ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಮತ್ತಿತರರು ಇದ್ದರು. ಶಾಲಿನಿ ಪ್ರಾರ್ಥಿಸಿದರು. ನಿವೃತ್ತ ಪ್ರಾಚಾರ್ಯ ಪ್ರೋ ಕೆ.ಎನ್. ಹೊಸ್ಮನಿ ನಿರೂಪಿಸಿದರು. ವಾಸುದೇವ ಶಾನಭಾಗ ವಂದಿಸಿದರು.ಭರ್ಜರಿ ಮೆರವಣಿಗೆನಗರದ ಅಂಚೆ ವೃತ್ತದಿಂದ ಸಮ್ಮೇಳನಾಧ್ಯಕ್ಷ ಡಿ.ಎಸ್. ನಾಯ್ಕ ಅವರನ್ನು ತೆರೆದ ವಾಹನದಲ್ಲಿ ಭರ್ಜರಿ ಮೆರವಣಿಗೆಯೊಂದಿಗೆ ಬಣ್ಣದ ಮಠಕ್ಕೆ ಕರೆತರಲಾಯಿತು. ಶಾಲಾ ವಿದ್ಯಾರ್ಥಿಗಳ ಶಿಸ್ತು ಬದ್ಧ ಸಂಚಲನ ಹಾಗೂ ಡೊಳ್ಳು ಕುಣಿತ ಗಮನ ಸೆಳೆಯಿತು.
ಸಮ್ಮೇಳನದಲ್ಲಿ ಬಿಡುಗಡೆಗೊಂಡ ಕೃತಿಗಳುಲೇಖರಾದ ಸುರೇಂದ್ರ ರೇವಣಕರ ಅವರ ಆದರ್ಶ ಕತೆಗಳು ಹಾಗೂ ಜಗತ್ತಿನ ಮಹಾ ವ್ಯಕ್ತಿಗಳು, ಹನುಮಂತ ಸಾಲಿಯವರ ನೆಗಿಸ್ಯಾವ ಸಾಲುಗಳು, ಪೂರ್ಣಿಮಾ ಹೆಗಡೆ ಅವರ ಮನೋಲ್ಲಾಸ, ಮಂಜುನಾಥ ಹೆಗಡೆಯವರ ಪೌರಾಣಿಕ ಸಾರ ಸಂಗ್ರಹ, ಗಜಾನನ ಭಟ್ಟ ಅವರ ಕಣದಂಗ ಕೃತಿಗಳು ಬಿಡುಗಡೆಗೊಂಡವು.