ಲಕ್ಷ್ಮೇಶ್ವರ: ವಿಶೇಷ ಶೈಲಿಯ ವಿನ್ಯಾಸದಿಂದ ಕೂಡಿದ ಉಡುಗೆ, ಸಾಂಸ್ಕೃತಿಕ ಪರಿಸರ ಹೊಂದಿದ ಸ್ಥಳದಲ್ಲಿ ವಾಸಿಸುತ್ತ ಸಂಸ್ಕೃತಿಯ ಜತೆಗೆ ಸಾಗುತ್ತಿರುವ ಬಂಜಾರ ಸಮುದಾಯದವರು ತಾಲೂಕಿನ ಹರದಗಟ್ಟಿ ತಾಂಡಾದಲ್ಲಿ ಸೌಹಾರ್ದ ಮೂಡಿಸುವ ಸಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಹಬ್ಬದ ಆಚರಣೆ ಸೊಬಗು ಸವಿಯಬೇಕಾದರೆ ಹರದಗಟ್ಟಿ ತಾಂಡಾಯತ್ತ ಮುಖಮಾಡಬೇಕು ಎನ್ನುವಂತಿತ್ತು. ಬಂಜಾರ ಸಮುದಾಯದ ತಾಂಡಾಗಳತ್ತ ಸಾಗಿದರೆ ಅಲ್ಲಿ ಪ್ರತಿ ಹಬ್ಬವೂ ವಿಶೇಷ ಆಚರಣೆಯಿಂದ ಕೂಡಿರುತ್ತದೆ. ನಾನಾ ಕೊರತೆ ನಡುವೆಯೂ ಅಲ್ಲಿ ಹುರುಪಿನ ಮನಸ್ಸುಗಳಿರುತ್ತವೆ.
ಆಚರಣೆ ಹೇಗೆ?:
ಯುಗಾದಿ ಅಮಾವಾಸ್ಯೆ ದಿನ ಭೂಮಿತಾಯಿಗೆ ಪೂಜೆ ಸಲ್ಲಿಸಿ ಆ ಮಣ್ಣನ್ನು ಚಿಕ್ಕ ಬುಟ್ಟಿಗಳಲ್ಲಿ ಸಂಗ್ರಹಿಸಲಾಯಿತು. ನಂತರ ಬುಟ್ಟಿಯಲ್ಲಿ ಧಾನ್ಯಗಳನ್ನು ಹಾಕಲಾಯಿತು. ಅವು ಮೊಳಕೆಯೊಡೆದ ನಂತರ ನಿಗದಿತ ದಿನದಂದು ಸಾಂಪ್ರದಾಯಿಕ ದೇವರ ಹಾಡುಗಳು ಭಜನೆಯೊಂದಿಗೆ ಜಾಗರಣೆ ನಡೆಯಿತು. ಮರುದಿನ ಆ ಸಸಿಗಳಿಗೆ ಒಂದೆಡೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು. ಕನ್ಯೆಯರೇ ಈ ಪೂಜೆ ನಡೆಸುವುದು ವಿಶೇಷ.ಮಣ್ಣಿನಿಂದ ಗಂಡು, ಹೆಣ್ಣು ಮೂರ್ತಿಗಳನ್ನು ನಿರ್ಮಿಸಿ ಅವುಗಳನ್ನು ಪೂಜಿಸಿ ಕಾಮ, ಕ್ರೋಧ ದೂರವಾಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಇದಕ್ಕೆ ''''ಗನಗೋರಾ'''' ಎನ್ನುತ್ತಾರೆ. ಪೂಜೆಯ ನಂತರ ಈ ಮೂರ್ತಿಗಳನ್ನು ನದಿಯಲ್ಲಿ ಹರಿಬಿಡಲಾಯಿತು.
ತಾಂಡಾಗಳಲ್ಲಿ ಸಂಭ್ರಮ: ಅಗತ್ಯ ಸಂಬಳದ ಕೆಲಸ ಅರಸಿ ಗುಳೆ ಹೋಗುವವರಲ್ಲಿ ಜಿಲ್ಲೆಯ ಜನರಲ್ಲಿ ಬಂಜಾರರೇ ಅಧಿಕ. ಹೀಗೆ ಗುಳೆ ಹೋದ ಜನ ಮತ್ತೆ ಆಗಮಿಸಿ ತಾಂಡಾದ ಜನರ ಮೊಗದಲ್ಲಿ ಹರ್ಷ ಮೂಡಿತು. ಸಸಿ ಹಬ್ಬ ಆಚರಿಸುವ ಕಾರಣಕ್ಕೆ ಗುಳೆ ಹೋಗಿದ್ದ ಜನ ಮರಳಿ ಬಂದಿದ್ದರು. ಬಿಕೋ ಎನ್ನುತ್ತಿದ್ದ ತಾಂಡಾಗಳಲ್ಲಿ ಸಸಿ ಹಬ್ಬದ ನೆಪದಲ್ಲಿ ಜನರ ಮೆರುಗು ಕಾಣಿಸಿತು.
ಬದುಕು ಸಮೃದ್ಧವಾಗಲಿ: ಸರ್ವರ ಬದುಕು ಬಂಗಾರವಾಗಲಿ ಎಂದು ಪ್ರಕೃತಿ ಮಾತೆಯನ್ನು ಪ್ರಾರ್ಥಿಸುವುದೇ ಸಸಿ ಹಬ್ಬದ ಮುಖ್ಯ ಉದ್ದೇಶ. ಉತ್ತಮ ಮಳೆಯಾಗಿ ಸರಿಯಾದ ಬೆಳೆ ಸಿಗಲಿ. ಗ್ರಾಮೀಣ ಜನರ ಬದುಕು ಸಮೃದ್ಧವಾಗಲಿ ಎಂದು ಪ್ರಾರ್ಥಿಸಲು ತಾಂಡಾದ ಎಲ್ಲ ಜನ ಈ ಹಬ್ಬದಲ್ಲಿ ಭಾಗವಹಿಸುತ್ತೇವೆ ಎಂದು ಹರದಗಟ್ಟಿ ತಾಂಡಾ ಹಿರಿಯರಾದ ಸೋಮಲಪ್ಪ ನಾಯಕ, ಜೀವಪ್ಪ ಡಾವ ತಿಳಿಸಿದರು.ಬಾಂಧವ್ಯ ಬೆಸೆಯುವ ಹಬ್ಬ: ಸಸಿ ಹಬ್ಬದ ನೆಪದಲ್ಲಿ ತಾಂಡಾದ ಎಲ್ಲ ಜನ ಒಂದೆಡೆ ಸೇರುತ್ತೇವೆ. ಇದರಿಂದ ನಮ್ಮ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇದು ಬಾಂಧವ್ಯ ಬೆಸೆಯುವ ಹಬ್ಬವಾಗಿದೆ ಎಂದು ಹರದಗಟ್ಟಿ ತಾಂಡಾ ಯುವ ಮುಖಂಡರಾದ ಕೃಷ್ಣ ನಾಯಕ, ದೇವಪ್ಪ ಬಡಿಗೇರ ತಿಳಿಸಿದರು.