ಸಂಭ್ರಮದ ಹೋಳಿ ಹಬ್ಬ: ಬಣ್ಣಗಳಲ್ಲಿ ಮಿಂದೆದ್ದ ಜನತೆ

KannadaprabhaNewsNetwork | Updated : Mar 26 2024, 01:20 PM IST

ಸಾರಾಂಶ

ಮಧ್ಯರಾತ್ರಿಯೇ ಕಾಮನನ್ನು ಸುಟ್ಟು ಬೆಳಗ್ಗೆ ೭ರಿಂದಲೇ ಬಣ್ಣದಾಟ ಪ್ರಾರಂಭವಾಯಿತು. ಬೆಳಕು ಹರಿಯುತ್ತಲೇ ಸಣ್ಣಸಣ್ಣ ಮಕ್ಕಳು ಮನೆಮಂದಿಗೆಲ್ಲ ಬಣ್ಣ ಎರಚಿ ಸೌಹಾರ್ದಯುತವಾಗಿ ಸಡಗರ ಸಂಭ್ರಮದಿಂದ ಕಾಮನ ಹಬ್ಬ, ಹೋಳಿ ಆಚರಿಸಿ ಖುಷಿ ಪಟ್ಟರು.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಐತಿಹಾಸಿಕ ಹೋಳಿ ಹುಣ್ಣಿಮೆ ರಂಗಪಂಚಮಿ ಹಿನ್ನೆಲೆಯಲ್ಲಿ ಸೋಮವಾರ ಶಿರಹಟ್ಟಿ ಪಟ್ಟಣದ ಜನತೆ ಬಣ್ಣದಾಟದಲ್ಲಿ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಯುವಕರು, ಮಕ್ಕಳು, ಮಹಿಳೆಯರು ಎಲ್ಲರೂ ಕಾಮನ ಕಟ್ಟಿಗೆ, ಭೀಮನ ಬೆರಣಿ, ಏನೇನು ಕದ್ದರು? ಸೌದೆ, ಕುಳ್ಳು ಕದ್ದರು. ಯಾತಕ್ಕಾಗಿ ಕದ್ದರು? ಕಾಮಣ್ಣನನ್ನು ಸುಡೋಕೆ ಎಂದು ಹೇಳಿ ಬಾಯಿ ಬಡಿದುಕೊಳ್ಳುತ್ತಾ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಮಧ್ಯರಾತ್ರಿಯೇ ಕಾಮನನ್ನು ಸುಟ್ಟು ಬೆಳಗ್ಗೆ ೭ರಿಂದಲೇ ಬಣ್ಣದಾಟ ಪ್ರಾರಂಭವಾಯಿತು. ಬೆಳಕು ಹರಿಯುತ್ತಲೇ ಸಣ್ಣಸಣ್ಣ ಮಕ್ಕಳು ಮನೆಮಂದಿಗೆಲ್ಲ ಬಣ್ಣ ಎರಚಿ ಸೌಹಾರ್ದಯುತವಾಗಿ ಸಡಗರ ಸಂಭ್ರಮದಿಂದ ಕಾಮನ ಹಬ್ಬ, ಹೋಳಿ ಆಚರಿಸಿ ಖುಷಿ ಪಟ್ಟರು.

ರಸ್ತೆಗಳಲ್ಲಿ ಯುವಕರ ಗುಂಪುಗಳು ಹಲಗೆ ಬಾರಿಸುತ್ತ, ಕುಣಿಯುತ್ತ ಸ್ನೇಹಿತರಿಗೆ, ಪರಿಚಯಸ್ತರಿಗೆ ಬಣ್ಣ ಎರಚಿ ಹೋಳಿ ಹಬ್ಬದ ಶುಭಾಷಯ ಕೋರಿದರು. ಪಟ್ಟಣದ ಕುಂಬಾರ ಓಣಿ, ಮರಾಠಾ ಗಲ್ಲಿ, ಮಹಿಷಿ ಓಣಿ, ಕುರುಬರ ಓಣಿ, ಮ್ಯಾಗೇರಿ ಓಣಿ, ಅಂಬೇಡಕರ ನಗರ, ವಿಜಯ ನಗರ, ವಿದ್ಯಾನಗರ ಹೀಗೆ ಎಲ್ಲೆಡೆ ಜನರು ಪರಸ್ಪರ ಬಣ್ಣ ಹಚ್ಚುವ ಮೂಲಕ ಜಾನಪದ ಹಾಡು ಹೇಳುತ್ತಾ ಸಂಭ್ರಮಿಸಿದರು.

ಬಣ್ಣದಾಟದಲ್ಲಿ ಯುವಕರೇ ಹೆಚ್ಚಾಗಿದ್ದರು. ಬೈಕ್‌ಗಳಲ್ಲಿ ಬಡಾವಣೆಯಿಂದ ಬಡಾವಣೆಗೆ ಸುತ್ತುತ್ತಾ ಎಲ್ಲರಿಗೂ ಬಣ್ಣ ಹಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರತಿ- ಮನ್ಮಥರನ್ನು ಪ್ರತಿಷ್ಠಾಪಿಸಿದ್ದ ಕೆಲವು ಓಣಿಗಳಲ್ಲಿ ಮಕ್ಕಳು, ಮಹಿಳೆಯರೆಲ್ಲರೂ ಬಣ್ಣದಾಟ ಆಡಿದರು. ಪಟ್ಟಣದ ಜನರೆಲ್ಲ ಒಂದಾಗಿ ಜಾತಿ, ಧರ್ಮದ ಭೇದವಿಲ್ಲದೇ ಹಬ್ಬ ಆಚರಿಸಿದ್ದು ವಿಶೇಷ. ಯುವಕರು ಗುಂಪು ಗುಂಪಾಗಿ ಹಲಗೆ ಬಡಿದು ಕುಣಿಯುತ್ತಾ ಬಣ್ಣ ಎರಚುತ್ತಿದ್ದರಿಂದ ಪಟ್ಟಣದ ಎಲ್ಲ ಬಡಾವಣೆಗಳು, ಪ್ರಮುಖ ರಸ್ತೆಗಳು ರಂಗೇರಿದ್ದವು. ಕೆಂಪು, ಹಸಿರು, ಕೇಸರಿ, ಹಳದಿ, ನೀಲಿ ಹೀಗೆ ಎಲ್ಲ ಬಣ್ಣಗಳು ಗಾಳಿಯಲ್ಲಿ ತೂರಲ್ಪಟ್ಟವು.

ಸಣ್ಣ ಮಕ್ಕಳಂತು ಪಿಚಕಾರಿ ಹಿಡಿದು ಹಿಂದಿನಿಂದ ಬಣ್ಣದ ನೀರು ಹಾಕಿ ಓಡುತ್ತಿದ್ದರು. ವಿಚಿತ್ರ ವೇಷಧಾರಿಗಳು ಬಣ್ಣ ಎರಚುತ್ತಾ ಅಡ್ಡಾಡುತ್ತಿದ್ದರು. ತಲೆಗೆ ಋಷಿಗಳ ರೀತಿಯಲ್ಲಿ ಕೂದಲು ಕಟ್ಟಿಕೊಂಡು ಕೆಲವರು ಅಡ್ಡಾಡಿದರೆ, ಇನ್ನೂ ಕೆಲವರು ಮುಖವಾಡಗಳ ಹಾಕಿಕೊಂಡು, ಜೋಕರ್ ಟೋಪಿ ಸಿಕ್ಕಿಕೊಂಡು ತಮಟೆ ಶಬ್ದಕ್ಕೆ ಹೆಜ್ಜೆ ಹಾಕುತ್ತಿದ್ದರು. ಮಧ್ಯಾಹ್ನ ೧೨ ಗಂಟೆಯಾದರೂ ಬಣ್ಣ ಕೊಳ್ಳುವುದು, ಬಣ್ಣ ಹಚ್ಚುವುದು ಮುಂದುವರಿದಿತ್ತು. ರಂಗಿನಾಟ ನಿಲ್ಲಿಸುವ ಮನಸ್ಸು ಯಾರಿಗೂ ಇದ್ದಂತಿರಲಿಲ್ಲ.

ಪೊಲೀಸ್ ಬಂದೋಬಸ್ತ್‌

ಬಣ್ಣದಾಟದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಪಿಐ ನಾಗರಾಜ ಮಾಡಳ್ಳಿ ಪಿಎಸ್‌ಐ ಶಿವಾನಂದ ಲಮಾಣಿ ಅವರು ಬಿಗಿಯಾದ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ಎಲ್ಲ ವೃತ್ತಗಳಲ್ಲೂ ಪೊಲೀಸ್‌ರನ್ನು ನಿಯೋಜಿಸಲಾಗಿತ್ತು. ಬಣ್ಣದಾಟದ ನಂತರ ರಂಗಪಂಚಮಿಯ ಭವ್ಯ ಮೆರವಣಿಗೆ ನಡೆಯಿತು. ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ರತಿ-ಮನ್ಮಥರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ರಗ್ಗಲಗಿ, ತಮಟೆ ಇತ್ಯಾದಿ ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿದ ಯುವಕರು, ಬಣ್ಣ ಹಚ್ಚುವುದನ್ನು ಮೆರವಣಿಗೆಯಲ್ಲೂ ಮುಂದುವರೆಸಿದ್ದರು.

Share this article