ಕೊಟ್ಟೂರು: ಪಡುವಣದಲ್ಲಿ ಸೂರ್ಯ ಜಾರುವ ಸಮಯಕ್ಕೆ ಅನುಗುಣವಾಗಿ ಕೊಟ್ಟೂರು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಮಹಾಕಾರ್ತೀಕೋತ್ಸವಕ್ಕೆ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರೆ ಚಾಲನೆ ನೀಡಿದರು.ಶ್ರೀಸ್ವಾಮಿಯ ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು ಉತ್ತಂಗಿ ಮಠದ ಸೋಮಶಂಕರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜಿಲ್ಲಾಧಿಕಾರಿಗಳು ದೀಪಗಳ ಬೆಳಗುವಿಕೆ ಪ್ರಾರಂಭಿಸುತ್ತಿದ್ದಂತೆ ಅಲ್ಲಿ ಜಮಾವಣೆಗೊಂಡಿದ್ದ ಭಕ್ತಸ್ತೋಮ ಕೊಟ್ಟೂರು ಕೊಟ್ಟೂರೇಶ್ವರ ಸ್ವಾಮಿಗೆ ಜಯಕಾರಗಳನ್ನು ಹಾಕುತ್ತ ಸಾಲು ಸಾಲಾಗಿದ್ದ ಪ್ರಣತಿಗಳ ದೀಪಗಳಿಗೆ ಎಣ್ಣೆ ಹಾಕುತ್ತ ಭಕ್ತಿ ಸಮರ್ಪಿಸಿದರು.
ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಪುಷ್ಪಾಲಂಕಾರ
ಕೊಟ್ಟೂರು: ಶ್ರೀಗುರುಕೊಟ್ಟೂರೇಶ್ವರ ಮಹಾಕಾರ್ತೀಕೋತ್ಸವದ ಸೋಮವಾರದಂದು ಅಸಂಖ್ಯಾತ ಭಕ್ತರು ಸೋಮವಾರ ಬೆಳಗಿನ ಜಾವ 5ರಿಂದಲೇ ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಶ್ರೀಸ್ವಾಮಿಯ ದರ್ಶನಾರ್ಶಿವಾದ ಪಡೆದರು.ಕೆಲ ಭಕ್ತರು ದೂರದ ಮುಂಡರಗಿ, ಶಿಗ್ಲಿ ಮತ್ತಿತರ ಕಡೆಗಳಿಂದ ಪಾದಯಾತ್ರೆ ಮೂಲಕ ಆಗಮಿಸಿದರಲ್ಲದೇ ಇನ್ನೂ ಕೆಲ ಭಕ್ತರು ಶ್ರೀಸ್ವಾಮಿಗೆ ವಿವಿಧ ಬಗೆಯ ಸೇವೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವುದು ದಿನವಿಡೀ ನಡೆದೆ ಇತ್ತು.
ಕಂಗೋಳಿಸಿದ ದೇವಸ್ಥಾನ:ಮಹಾಕಾರ್ತೀಕೋತ್ಸವದ ನಿಮಿತ್ತ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿ ಹಿರೇಮಠವನ್ನು ಸಂಪೂರ್ಣವಾಗಿ ವಿವಿಧ ಬಗೆಯ ಆಕರ್ಷಕ ಹೂಗಳ ರಾಶಿಯ ಅಲಂಕಾರದೊಂದಿಗೆ ಸಿಂಗರಿಸುವ ಕಾರ್ಯವನ್ನು ಪಟ್ಟಣದ ವರ್ತಕ ಕೆ.ಎನ್. ಕೊಟ್ರೇಶ ಕೈಗೊಂಡರು. ಪುಷ್ಪಾಲಂಕಾರ ಮಾಡಲೆಂದೇ ಕೊಟ್ರೇಶ ಬೆಂಗಳೂರು ಮತ್ತು ದಾವಣಗೆರೆಯಿಂದ ನುರಿತ 20ಕ್ಕೂ ಹೆಚ್ಚು ಕೆಲಸಗಾರರನ್ನು ಕರೆಯಿಸಿಕೊಂಡು ಭಾನುವಾರ ರಾತ್ರಿಯಿಂದ ಕಾರ್ಯ ಕೈಗೊಂಡರು. ₹4.5 ಲಕ್ಷ ವೆಚ್ಚದ ಹೂಗಳನ್ನು ಇದಕ್ಕೆಂದೇ ದೂರದ ಊರುಗಳಿಂದ ತರಿಸಲಾಗಿತ್ತು. ಕಳೆದ ವರ್ಷವೂ ಈ ರೀತಿಯ ಪುಷ್ಪಾಲಂಕಾರವನ್ನು ಕೊಟ್ರೇಶ ಕೈಗೊಂಡಿದ್ದರಲ್ಲದೇ ಈ ವರ್ಷವೂ ಆಕರ್ಷಿಸುವಂತೆ ಸಿಂಗರಿಸುವ ಮೂಲಕ ಶ್ರೀಸ್ವಾಮಿಗೆ ಭಕ್ತಿ ಸಮರ್ಪಿಸಿದರು. ಈ ಬಗೆಯಲ್ಲಿ ಶೃಂಗಾರಗೊಂಡ ಹಿರೇಮಠವನ್ನು ಕಣ್ತುಂಬಿಕೊಳ್ಳಲು ಭಕ್ತರು ಉದ್ದನೆಯ ಸಾಲಿನೊಂದಿಗೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಸ್ವಾಮಿಯ ಇತರ ದೇವಸ್ಥಾನಗಳಾದ ಗಚ್ಚಿನಮಠ, ತೊಟ್ಟಿಲುಮಠ, ಮರ‍್ಕಲ್ ಮಠ ಮತ್ತು ಮರಿಕೊಟ್ಟೂರೇಶ್ವರ ದೇವಸ್ಥಾನಗಳಿಗೆ ಸಹ ಭಕ್ತರು ದಂಡುದಂಡಾಗಿ ತೆರಳಿ ನಮಿಸಿ ಭಕ್ತಿ ಸಮರ್ಪಿಸಿದರು.ದೇವಸ್ಥಾನಕ್ಕೆ ತೆರಳುವ ರಸ್ತೆಗಳಲ್ಲಿ ವಾಹನಗಳು ತೆರಳದಂತೆ ಪೊಲೀಸರು ಅಲ್ಲಲ್ಲಿ ಸಂಪೂರ್ಣ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು.