ರಾಜ್ಯ ಸಿವಿಲ್‌ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ಅಡಿ ನೇಮಕಾತಿಗೆ ಸಂಬಂಧಿಸಿದಂತೆ 2027ರ ಡಿ.31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಒಂದು ಬಾರಿ ಮಾತ್ರ ಅನ್ವಯಿಸಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು : ರಾಜ್ಯ ಸಿವಿಲ್‌ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ಅಡಿ ನೇಮಕಾತಿಗೆ ಸಂಬಂಧಿಸಿದಂತೆ 2027ರ ಡಿ.31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಒಂದು ಬಾರಿ ಮಾತ್ರ ಅನ್ವಯಿಸಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

35 ವರ್ಷಗಳ ಗರಿಷ್ಠ ವಯೋಮಿತಿ 40 ವರ್ಷಕ್ಕೆ

ಈ ಕ್ರಮದಿಂದಾಗಿ ಸಾಮಾನ್ಯ ವರ್ಗಕ್ಕೆ ಅರ್ಜಿ ಸಲ್ಲಿಸಲು ಈಗಿರುವ 35 ವರ್ಷಗಳ ಗರಿಷ್ಠ ವಯೋಮಿತಿ 40 ವರ್ಷಕ್ಕೆ, ಹಿಂದುಳಿದ ವರ್ಗಗಳಿಗೆ ಇರುವ 38 ವರ್ಷಗಳ ವಯೋಮಿತಿ 43 ವರ್ಷಗಳಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಇರುವ 40 ವರ್ಷಗಳ ವಯೋಮಿತಿ 45 ವರ್ಷಗಳಿಗೆ ವಿಸ್ತರಣೆಯಾಗಲಿದೆ. ಅಲ್ಲದೆ. ಈ ವಯೋಮಿತಿ ಸಡಿಲಿಕೆಯು 2027ರ ಡಿ. 31ರವರೆಗೆ ಹೊರಡಿಸಲಾಗುವ ನೇಮಕಾತಿ ಅಧಿಸೂಚನೆಗೆ ಅನ್ವಯವಾಗಲಿದೆ.

ಕೆಲ ವರ್ಷಗಳಿಂದ ನೇಮಕಾತಿ ವಿಳಂಬ

ಒಳ ಮೀಸಲಾತಿ ಸೇರಿ ಇನ್ನಿತರ ಕಾರಣಗಳಿದ ಕೆಲ ಕೆಲ ವರ್ಷಗಳಿಂದ ನೇಮಕಾತಿ ವಿಳಂಬವಾಗಿದೆ. ಅದರಿಂದ ಉದ್ಯೋಗಾಕಾಂಕ್ಷಿಗಳ ವಯೋಮಿತಿ ಮೀರಿದ್ದು, ಅವರು ಸರ್ಕಾರಿ ಉದ್ಯೋಗದಿಂದ ವಂಚಿತರಾಗುವಂತಾಗಿದೆ. ಹೀಗಾಗಿ ವಯೋಮಿತಿಯನ್ನು ಸಡಿಲಗೊಳಿಸುವಂತೆ ಆಗ್ರಹಿಸಲಾಗುತ್ತಿತ್ತು. ಆ ಹಿನ್ನೆಲೆಯಲ್ಲಿ 2025ರ ಸೆ.29ರಂದು ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿ ಆದೇಶಿಸಲಾಗಿತ್ತು.

ಆದರೆ, ವಯೋಮಿತಿ ಸಡಿಲಿಕೆಯನ್ನು 5 ವರ್ಷಗಳಿಗೆ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡಗಳು ಬಂದಿದ್ದವು. ಅದನ್ನು ಮನಗಂಡು ಕಳೆದ ಸಚಿವ ಸಂಪುಟ ಸಭೆಯಲ್ಲಿ ಒಂದು ಬಾರಿ ಮಾತ್ರ ಅನ್ವಯಿಸಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷಗಳಿಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಆ ನಿರ್ಧಾರದಂತೆ ಸರ್ಕಾರದಿಂದ ಗರಿಷ್ಠ ವಯೋಮಿತಿಯನ್ನು 5 ವರ್ಷಗಳಿಗೆ ಹೆಚ್ಚಿಸಿ ಆದೇಶಿಸಲಾಗಿದೆ.