ರಾಮನಗರ: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಸಡಗರ-ಸಂಭ್ರಮದಿಂದ ಗೌರಿ-ಗಣೇಶನನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಹಳೇ ಬಸ್ ನಿಲ್ದಾಣ, ಕೆಂಪೇಗೌಡ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳು ಜನ ಜಂಗುಳಿಯಿಂದ ತುಂಬಿಹೋಗಿತ್ತು. ಹಬ್ಬದ ವಸ್ತುಗಳ ಖರೀದಿ ಭರಾಟೆ ಜೋರಾಗಿ ನಡೆದಿತ್ತು. ವರ್ತಕರು-ವ್ಯಾಪಾರಸ್ಥರೆಲ್ಲರೂ ಮಾರಾಟದಲ್ಲಿ ಬ್ಯುಸಿಯಾಗಿದ್ದರು.ಮನೆಯಲ್ಲಿ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಪೂಜಾ ಸಾಮಗ್ರಿಗಳು, ಚೆಂದದ ಪುಟ್ಟ ಗೌರಿ-ಗಣೇಶ ವಿಗ್ರಹಗಳ ಆಯ್ಕೆಯಲ್ಲಿ ತಲ್ಲೀನರಾಗಿದ್ದರು. ಇಷ್ಟವಾದ ಮೂರ್ತಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದರು.
ದೇವಾಲಯಗಳಲ್ಲೂ ಗೌರಿ ಪ್ರತಿಷ್ಠಾಪನೆ :ಸಾಮಾನ್ಯವಾಗಿ ದೇವಾಲಯಗಳಲ್ಲೇ ಗೌರಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ದೇವರ ದರ್ಶನಕ್ಕೆ ಆಗಮಿಸುವ ಮಹಿಳೆಯರು ಅಲ್ಲೇ ಗೌರಿಯನ್ನು ಪೂಜಿಸಿ ಮುತ್ತೈದೆಯರಿಗೆ ಬಾಗಿನ ಸಮರ್ಪಿಸುವರು. ಇನ್ನೂ ಹಲವರು ಮನೆಯಲ್ಲೇ ಗೌರಿಯನ್ನು ಪುಷ್ಪಮಂಟಪದಲ್ಲಿ ಪ್ರತಿಷ್ಠಾಪಿಸಿ, ವಿವಿಧ ಹೂವುಗಳಿಂದ ಅಲಂಕರಿಸುವರು. ನೈವೇದ್ಯವಾಗಿ ಹೋಳಿಗೆ, ಪೊಂಗಲ್, ಪುಳಿಯೋಗರೆ, ಮೊಸರನ್ನ, ಹಾಲು, ತುಪ್ಪ, ಮೊಸರನ್ನು ತಯಾರಿಸಿಟ್ಟುಕೊಳ್ಳುವುದಕ್ಕೆ ಅಣಿಯಾಗುತ್ತಿದ್ದರು.
ಗಣಪತಿಯನ್ನು ಪ್ರತಿಷ್ಠಾಪಿಸುವುದಕ್ಕೆ ಮೊದಲಿನಷ್ಟು ಉತ್ಸಾಹ ಯುವಕರಲ್ಲಿ ಈಗ ಇಲ್ಲವಾದರೂ ಕೆಲವು ಯುವಕರು ದೊಡ್ಡ ಗಣೇಶನನ್ನು ಖರೀದಿಸಿ ಪ್ರತಿಷ್ಠಾಪಿಸುವುದಕ್ಕೆ ಉತ್ಸುಕರಾಗಿದ್ದರು. ಅಂಗಡಿಗಳಲ್ಲಿ ಗಣೇಶನ ತರಹೇವಾರಿ ಬಣ್ಣ, ವಿವಿಧ ವಿನ್ಯಾಸದ ವಿಗ್ರಹಗಳು ಗಮನಸೆಳೆಯುತ್ತಿದ್ದವು. ಯುವಕರು ಚೌಕಾಸಿ ವ್ಯಾಪಾರ ಮಾಡಿ ಮೂರ್ತಿಗಳನ್ನು ಖರೀದಿಸುವ ದೃಶ್ಯಗಳು ಕಂಡುಬಂದವು.ಹೂವು-ಹಣ್ಣು-ತರಕಾರಿ ಬೆಲೆ ಸಾಮಾನ್ಯ:
ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ಸಾಮಾನ್ಯಜನರನ್ನು ತಟ್ಟಿದಂತೆ ಕಂಡುಬರುತ್ತಿಲ್ಲ. ಸಾಮಾನ್ಯ ದಿನಗಳಲ್ಲಿದ್ದಷ್ಟೇ ಬೆಲೆ ಹಣ್ಣು, ತರಕಾರಿಗಳಲ್ಲೂ ಕಂಡುಬರುತ್ತಿತ್ತು. ಹೂವಿನ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಹಣ್ಣುಗಳ ಪೈಕಿ ಪ್ರತಿ ಕೆಜಿ ಮಿಕ್ಸ್-150 ರು.. ಕಿತ್ತಳೆ 80-100 ರು., ಸೇಬು 100- 150 ರು., ಮೂಸಂಬಿ 80 ರು., ದಾಳಿಂಬೆ 100 ರು., ದ್ರಾಕ್ಷಿ- 120 ರು., ಕಪ್ಪು ದ್ರಾಕ್ಷಿ- 160 ರು., ಮರಸೇಬು-100 ರು., ಬಾಳೆಹಣ್ಣು-100 ರು., ಸೀಬೆ-80 ರು., ಸೀತಾಫಲ-120 ರು., ಪೈನಾಪಲ್ ಒಂದಕ್ಕೆ 50ರು.ನಂತೆ ಮಾರಾಟವಾಗುತ್ತಿತ್ತು.ತರಕಾರಿಗಳಲ್ಲಿ ಮಿಕ್ಸ್ ಪ್ರತಿ ಕೆಜಿಗೆ 100 ರು., ಬೀನಿಸ್- 60 ರು.., ಗೆಡ್ಡೆಕೋಸು-60 ರು., ಕ್ಯಾರೆಟ್- 60 ರು., ಬೀಟ್‌ರೂಟ್-70 ರು., ಬೆಂಡೆಕಾಯಿ-45 ರು., ಮೂಲಂಗಿ-30 ರು., ಟಮ್ಯಾಟೋ-40 ರು., ಸೌತೆಕಾಯಿ- 10 ರು., ನಿಂಬೆಹಣ್ಣು- 4 ಕ್ಕೆ 20 ರು. ಇದ್ದರೆ, ಕೊತ್ತಂಬರಿ ಒಂದು ಕಟ್ಟಿಗೆ 20ರು., ಪುದೀನ-10 ರು., ಸಬ್ಬಸಿಗೆ ಸೊಪ್ಪು-20 ರು., ಪಾಲಾಕ್-10 ರು., ಕೀರೆಸೊಪ್ಪು-10 ರು., ಮೆಂತ್ಯ-20 ರು.ನಂತೆ ಮಾರಾಟವಾಗುತ್ತಿದ್ದುದು ಕಂಡುಬಂದಿತು.
ಹೂವಿನ ಬೆಲೆಯೂ ಸಾಮಾನ್ಯವಾಗಿತ್ತು. ಪ್ರತಿ ಮಾರು ಸೇವಂತಿಗೆ 105 ರು., ಕಾಕಡಾ-200 ರು., ಮಲ್ಲಿಗೆ-300 ರು., ಮರಳೆ-200 ರು., ಕನಕಾಂಬರ-130 ರು., ಚೆಂಡು ಹೂ-80 ರು. ಹಾರಗಳು 150 ರು.ನಿಂದ 200 ರು., ಮಲ್ಲಿಗೆ ಹಾರ 600 ರು.ಗಳಿಗೆ ಮಾರಾಟವಾಗುತ್ತಿದ್ದವು.ಕೋಟ್ ...................
ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ಗಣಪತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ. ಗಣಪತಿ ವಿಸರ್ಜನೆಗೆ ಸಿರಿಗೌರಿ ಕಲ್ಯಾಣಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮೂಲ ಸೌಕರ್ಯಗಳಾದ ಕ್ರೇನ್‌ವ್ಯವಸ್ಥೆ, ಕಲ್ಯಾಣಿಗೆ ಬಣ್ಣ ಹೊಡೆಯುವುದು, ಸಿಸಿ ಟಿವಿ ಅಳವಡಿಕೆ, ನೀರಿನ ಪಂಪ್ ಟ್ಯಾಂಕರ್, ಶುಚಿತ್ವ, ನುರಿತ ಈಜುಗಾರ ತಂಡಗಳಿರುತ್ತವೆ.ಈಗಾಗಲೇ ಗುಂಡಣ್ಣ ಮತ್ತು ತಂಡದವರು ಸಿರಿ ಕಲ್ಯಾಣಿ ಸಿದ್ದತಾ ನಿರತರಾಗಿದ್ದಾರೆ.-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.
ಬಾಕ್ಸ್ .................ಗಣೇಶ ಚತುರ್ಥಿಯಲ್ಲಿ ಡಿಜೆ ನಿಷೇಧ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲಾದ್ಯಂತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನಾ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯಲು ಹಾಗೂ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವಂತಹ ಘಟನೆಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಕಾಯ್ದೆ-1963 ಕಲಂ 35, 36 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಆ. 27 ರಿಂದ ಗಣೇಶೋತ್ಸವ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ಗಣೇಶ ಚತುರ್ಥಿ ಹಬ್ಬವನ್ನು ಆಚರಣೆ ಮಾಡುವ ಸಮಯದಲ್ಲಿ ಡಿಜೆ ಸಿಸ್ಟಂ ಬಳಕೆ ನಿಷೇಧಗೊಳಿಸಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಆದೇಶಿಸಿದ್ದಾರೆ.25ಕೆಆರ್ ಎಂಎನ್ 5.ಜೆಪಿಜಿ
ರಾಮನಗರದಲ್ಲಿ ಮಾರಟಕ್ಕಿಟ್ಟಿರುವ ಗಣಪತಿ ಮೂರ್ತಿಗಳು.