ಹಾವೇರಿ: ಸ್ಥಳೀಯ ಬಸವೇಶ್ವರ ನಗರ ಸಿ ಬ್ಲಾಕ್‌ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಚೌಡೇಶ್ವರಿ ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮೊದಲ ದಿನವಾದ ಮಂಗಳವಾರ ಸಂಜೆ ಚೌಡೇಶ್ವರಿ ದೇವಿಯ ಶಿಲಾಮೂರ್ತಿ ಹಾಗೂ ಕುಂಭ ಮೆರವಣಿಗೆ ಭಕ್ತಿಭಾವದಿಂದ ನಡೆಯಿತು.
ಪುರವಂತಿಕೆ, ಡೊಳ್ಳು ಸೇರಿದಂತೆ ಸಕಲ ವಾದ್ಯ ವೈಭವ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ನಗರದ ವಿವಿಧೆಡೆ ಸಂಚರಿಸಿದ ಮೆರವಣಿಗೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಚೌಡೇಶ್ವರಿ ದೇವಸ್ಥಾನವನ್ನು ತಲುಪಿದ ಶಿಲಾಮೂರ್ತಿಗೆ ಪೂಜಾ ಕೈಂಕರ್ಯಗಳು ಜರುಗಿದವು. ವಿಗ್ರಹಕ್ಕೆ ಜಲಾವಾಸ ಸಂಸ್ಕಾರವನ್ನು ನೀಡಲಾಯಿತು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರದೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಾಗಬೇಕು. ಚೌಡೇಶ್ವರಿ ದೇವಿಯ ಆರಾಧನೆಯ ಮೂಲಕ ಸಮಾಜದಲ್ಲಿ ಭಕ್ತಿ, ಶಾಂತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆ ಮತ್ತಷ್ಟು ಬಲಗೊಳ್ಳಲಿ. ಯುವಜನರು ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.ಮೆರವಣಿಗೆಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಗೌರವಾಧ್ಯಕ್ಷ ಸಂಜೀವಕುಮಾರ ನೀರಲಗಿ, ಸಮಿತಿ ಅಧ್ಯಕ್ಷ ಕೋಟ್ರೇಶಪ್ಪ ಬಿಜಾಪೂರ, ಉಪಾಧ್ಯಕ್ಷ ಎಂ.ಬಿ. ಚಿಮ್ಮನಕಟ್ಟಿ, ಪರಮೇಶಪ್ಪ ಶಿವಣ್ಣನವರ, ಕೆ.ಸಿ.ಪಾವಲಿ, ಡಾ. ಮಹದೇವಿ ಕಣವಿ, ಆರ್.ಬಿ. ದಿಡಗೂರ, ಮಲ್ಲಿಕಾರ್ಜುನ ತಿಮ್ಮೇನಹಳ್ಳಿ, ಶಿವಕುಮಾರ ಹಡಪದ, ಬಸವರಾಜ ಕೋರಿ, ಕುಮಾರ್ ಹಡಪದ, ಈ.ಸಿ. ಅಗಸಿಬಾಗಲ, ಡಾ.ವಿ.ಎಚ್. ಪ್ರಭು, ಡಾ. ಬಸವರಾಜ ವೀರಾಪುರ, ಡಿ.ಎನ್. ಪೂಜಾರ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಭಕ್ತರು ಹಾಗೂ ನಗರದ ವಿವಿಧ ಬಡಾವಣೆಗಳ ಸಾರ್ವಜನಿಕರು ಭಾಗವಹಿಸಿದ್ದರು.