ದೀಪಾವಳಿ ಖರೀದಿಗೆ ಗದಗ ಮಾರುಕಟ್ಟೆಯಲ್ಲಿ ಜನಜಂಗುಳಿ, ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆವಿಶೇಷ ವರದಿ
ಜಿಲ್ಲೆಯಾದ್ಯಂತ ಬರದ ಛಾಯೆ, ಕೃಷಿ ಚಟುವಟಿಕೆಯಲ್ಲಿನ ಹಿನ್ನಡೆ, ರೈತರ ಆರ್ಥಿಕ ಸಂಕಷ್ಟದ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಗದಗ ಬೆಟಗೇರಿ ಅವಳಿ ನಗರದ ಜನತೆ ಸಜ್ಜಾಗಿದ್ದಾರೆ. ಹಬ್ಬದ ಸಿದ್ಧತೆಗಾಗಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರ ಖರೀದಿ ಭರಾಟೆ ಜೋರಾಗಿದ್ದು, ಮಾರುಕಟ್ಟೆ ರಸ್ತೆಗಳಲ್ಲಿ ಜನಜಂಗುಳಿಯಿಂದ ತುಂಬಿ ಹೋಗಿತ್ತು.
ದೀಪಾವಳಿ ಹಬ್ಬದ ಹಿನ್ನೆಲೆ ಮನೆಗಳನ್ನು ಶೃಂಗರಿಸಲು ಅಗತ್ಯವಿರುವ ಬಾಳೆಕಂಬ, ಬಾಳೆಹಣ್ಣು, ಕಬ್ಬು, ಚೆಂಡು ಹೂವು ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಖರೀದಿಗೆ ಸಾರ್ವಜನಿಕರು ಮುಗಿಬಿದ್ದರು. ಹೀಗಾಗಿ ಹೂವು, ಹಣ್ಣು, ಕಬ್ಬು ಹಾಗೂ ಅಲಂಕಾರಿಕ ವಸ್ತುಗಳ ಮಾರಾಟಗಾರರಿಗೆ ಉತ್ತಮ ವ್ಯಾಪಾರ ವಹಿವಾಟು ನಡೆಯಿತು.ನಗರದ ಮಾರ್ಕೆಟ್ ರಸ್ತೆ, ನಾಮಜೋಶಿ ರಸ್ತೆ, ಗ್ರೇನ್ ಗ್ರೋಸರಿ ಮಾರುಕಟ್ಟೆ ರಸ್ತೆ ಹಾಗೂ ವೀರಶೈವ ಲೈಬ್ರರಿ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ವಹಿವಾಟು ಬಿರುಸಿನಿಂದ ನಡೆಯಿತು. ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಕುಟುಂಬ ಸಮೇತ ಆಗಮಿಸಿದ್ದ ಜನರು ಅಂಗಡಿಗಳಲ್ಲಿ ವಸ್ತುಗಳ ಬೆಲೆ ವಿಚಾರಿಸಿ, ಚೌಕಾಸಿ ಮಾಡಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಜನರ ಓಡಾಟ ಹೆಚ್ಚಾದ ಪರಿಣಾಮ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವೂ ನಿಧಾನಗೊಂಡಿತ್ತು.
ಈ ಬಾರಿ ಹಬ್ಬದ ಸಾಮಗ್ರಿಗಳ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಹೂವು, ಹಣ್ಣು, ಕಬ್ಬು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಾರೆ, ಬರದ ಕರಿನೆರಳು ಜನರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದ್ದರೂ, ದೀಪಾವಳಿಯ ಬೆಳಕಿನ ಸಂಭ್ರಮಕ್ಕೆ ಮಾತ್ರ ಯಾವುದೇ ಕೊರತೆಯಾಗದಂತೆ ಗದಗ ಬೆಟಗೇರಿ ಜನತೆ ಸಿದ್ಧತೆ ನಡೆಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಸಂಪ್ರದಾಯ, ನಂಬಿಕೆ ಹಾಗೂ ಕುಟುಂಬದ ಸಂತೋಷಕ್ಕೆ ಆದ್ಯತೆ ನೀಡಿ ಬೆಳಕಿನ ಹಬ್ಬವನ್ನು ಬರಮಾಡಿಕೊಳ್ಳುತ್ತಿದ್ದಾರೆ.ದೀಪಾವಳಿ ಬಂದರೆ ಮನೆಗೆ ಬೇಕಾದ ಹೂವು, ಹಣ್ಣು, ಕಬ್ಬು, ಬಾಳೆಕಂಬ ಸೇರಿದಂತೆ ಎಲ್ಲವನ್ನೂ ಖರೀದಿಸಲೇಬೇಕು. ಆದರೆ ಈ ಬಾರಿ ಎಲ್ಲ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಮೊದಲಿನಷ್ಟು ಕಡಿಮೆ ಖರ್ಚಿನಲ್ಲಿ ಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ. ಆದರೂ ಸಂಪ್ರದಾಯ ಬಿಡಲು ಸಾಧ್ಯವಿಲ್ಲ, ಅದಕ್ಕಾಗಿ ಹೆಚ್ಚಿನ ಬೆಲೆ ನೀಡಿ ಖರೀದಿಸುವುದು ಅನಿವಾರ್ಯವಾಗಿದೆ.
ಮಹೇಶ ಬೂದಿಹಾಳ, ಗ್ರಾಮೀಣ ಪ್ರದೇಶದಿಂದ ಖರೀದಿಗೆ ಆಗಮಿಸಿದ್ದ ರೈತ